ವೈದ್ಯ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

25-HNL-4
Published on

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ದೀಪಾವಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಹೋರಿ ಸ್ಪರ್ಧೆ ವೇಳೆ ಹೋರಿಯೊಂದು ಗುದ್ದಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭರತ್ ಹಿಂಗಮೇರಿ ಮೃತಪಟ್ಟಿದ್ದಾರೆ. ಈ ಸಾವಿಗೆ ತಿಳವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಹಾಗೂ ಸಿಬ್ಬಂದಿಯೇ ಕಾರಣವಾಗಿದ್ದು, ಅವರ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿ ತಾಲೂಕಿನ ತಿಳವಳ್ಳಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಗ್ರಾಪಂ ಅಧ್ಯಕ್ಷೆ ರೇಖಾ ಕುರುಬರ, ಹೋರಿಹಬ್ಬದಲ್ಲಿ ಗಾಯಗೊಂಡಿದ್ದ ಭರತ್‌ನನ್ನು ತಕ್ಷಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ, ಅಲ್ಲಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಇರಲಿಲ್ಲ. ಈ ವಿಷಯ ತಿಳಿಸಿ ಒಂದು ಗಂಟೆ ಕಾಯ್ದರೂ ಬಾರದಿದ್ದಾಗ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಭರತ್ ಮೃತಪಟ್ಟಿದ್ದಾನೆ. ಈ ಸಾವಿಗೆ ಇಲ್ಲಿಯ ಸಿಬ್ಬಂದಿ, ವೈದ್ಯರೇ ಕಾರಣ ಎಂದು ಆರೋಪಿಸಿದರು.

ಈ ಹಿಂದೆಯೂ ಇಲ್ಲಿನ ವೈದ್ಯರ ಮೇಲೆ ಗಂಭೀರ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದ್ದವು. ಈ ಕುರಿತು ವಿಚಾರಿಸಲು ವೈದ್ಯರಿಗೆ ಕರೆ ಮಾಡಿದಾಗ ಅವಾಚ್ಯವಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮ ಪಂಚಾಯಿತಿಯಿಂದ ಇಲ್ಲಿಯ ವೈದ್ಯರನ್ನು ವರ್ಗಾಯಿಸುವಂತೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅದು ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಅವರ ವರ್ತನೆ ಮಿತಿ ಮೀರಿದೆ. ಹೀಗಾಗಿ ಅವರನ್ನು ಬೇರೆ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಭಾರಿ ಜಿಲ್ಲಾ ವೈದ್ಯಾಧಿಕಾರಿ ಡಾ.ಎಂ. ಜಯಾನಂದ ಮನವಿ ಸ್ವೀಕರಿಸಿ, ಒಪ್ಪಂದದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಇಲ್ಲಿನ ವೈದ್ಯಾಧಿಕಾರಿ ಹಾಗೂ ಇಬ್ಬರು ನರ್ಸ್‌ಗಳನ್ನು ತಕ್ಷಣವೇ ವರ್ಗಾವಣೆಗೊಳಿಸುತ್ತಿದ್ದೇವೆ. ವೈದ್ಯಕೀಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಸರ್ಕಾರದಿಂದ ನಿಯುಕ್ತಿಗೊಂಡ ವೈದ್ಯರು ಹಾಗೂ ನರ್ಸ್‌ಗಳನ್ನು ತಿಳವಳ್ಳಿ ಆಸ್ಪತ್ರೆಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಿಳವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಒದಗಿಸಲಾಗುವುದು ಎಂದು ಪ್ರಭಾರಿ ಡಿಎಚ್‌ಒ ಇದೇ ಸಂದರ್ಭದಲ್ಲಿ ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ.ಕೆ.ಜೆ.ಲಿಂಗರಾಜ್, ಸ್ಥಳೀಯ ಮುಖಂಡರಾದ ರಮೇಶ ಉಪ್ಪಾರ, ಹನುಮಂತಪ್ಪ ಶಿರಾಳಕೊಪ್ಪ, ಕುಮಾರ ಲಕ್ಮೋಜಿ, ಆರೀಫ್ ಲೋಹಾರ, ಸಿದ್ದಲಿಂಗಪ್ಪ ಕಮಡೊಳ್ಳಿ, ಬಸವರಾಜ್ ಚವ್ಹಾಣ, ರಾಜು ಶೇಷಗಿರಿ, ದಯಾನಂದ ಹಾವೇರಿ, ವಾಸೀಮ್ ಪಠಾಣ, ಸುನೀಲ ಬಾರ್ಕಿ, ಬಸವರಾಜ ನರೇಂದ್ರ, ಹನುಮಂತಪ್ಪ ಕಲ್ಲೇರ, ಹನುಮಂತ ಕೊಂಡೇರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net