

ಹಗರಿಬೊಮ್ಮನಹಳ್ಳಿ: ಹಂಪಾಪಟ್ಟಣದ ತಿಗಳನ ಕೆರೆ ಭರ್ತಿಯಾಗಿ ಕೋಡಿ ಹರಿದಿದ್ದು, ರೈತರ ಮೊಗದಲ್ಲಿ ಸಂಭ್ರಮ ಮನೆಮಾಡಿದೆ. ಈ ಕೆರೆ 70 ಎಕರೆಗೂ ಹೆಚ್ಚು ವಿಸ್ತೀರ್ಣವಿದ್ದು, ನೂರಾರು ಎಕರೆಗೆ ನೀರುಣಿಸುತ್ತಿದೆ. ಪೋತಲಗಟ್ಟಿ, ತಿಮ್ಮಲಾಪುರ, ಚಿಲಕನಹಟ್ಟಿ, ಮಗಿಮಾವಿನಹಳ್ಳಿಯ ಎರಡು ಕೆರೆಗಳು ಕೋಡಿಬಿದ್ದಾಗ ತಿಗಳನ ಕೆರೆಯತ್ತ ನೀರು ಹರಿದು ಬರುತ್ತದೆ. ಈ ಮೊದಲು ಕೆರೆಗಳು ತುಂಬಿ ಕೋಡಿ ಬಿದ್ದಾಗ ನೀರು ತುಂಗಭದ್ರಾ ನದಿಗೆ ಸೇರುತ್ತಿತ್ತು. 2000ರಲ್ಲಿ ಶಾಸಕರಾಗಿದ್ದ ಸಿರಾಜ್ ಶೇಖ್ ಅನುದಾನದಲ್ಲಿ ತಡೆಗೋಡೆ ಹಾಗೂ ಕಾಲುವೆ ನಿರ್ಮಿಸಿ ಕೆರೆಯತ್ತ ನೀರು ಹರಿಸಲಾಯಿತು. ಇದರಿಂದಾಗಿ ಈ ಭಾಗದಲ್ಲಿ ಮಳೆಯಾಗದಿದ್ದರೂ ಕೆರೆಗಳು ಭರ್ತಿಯಾಗುತ್ತವೆ.