

ಚನ್ನಪಟ್ಟಣ
ಸಾಮಾನ್ಯವಾಗಿ ಕಳ್ಳರು ತಮ್ಮ ಕೈಚಳಕ ತೋರಲು ನಿರ್ಜನ ಪ್ರದೇಶಗಳು ಹಾಗೂ ಕೆಲ ಆಯ್ದ ಸ್ಥಳಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಆದರೆ, ಇಲ್ಲೊಂದು ಕಳ್ಳರ ಗುಂಪು ನ್ಯಾಯಾಲಯದ ಮುಂಭಾಗವೇ ರಾಜಾರೋಷವಾಗಿ ಕಳ್ಳತನ ಮಾಡುವ ಮೂಲಕ ತಮ್ಮ ಭಂಡತನ ತೋರಿದ್ದಾರೆ.
ಗುರುವಾರ ಮುಂಜಾನೆ ವೇಳೆ ನಗರದ ನ್ಯಾಯಾಲಯದ ಮುಂಭಾಗವಿರುವ ಭಾಸ್ಕರ್ ಮೆಡಿಕಲ್ಸ್ ಬೀಗ ಒಡೆದಿರುವ ಕಳ್ಳರ ಗುಂಪೊಂದು ಅಂಗಡಿಯಲ್ಲಿದ್ದ ಹಣ ಹಾಗೂ ಕೆಲವಸ್ತುಗಳನ್ನು ದೋಚಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ನಾಲ್ಕು ಜನರ ಗುಂಪು ಈ ಕಳ್ಳತನದಲ್ಲಿ ಭಾಗಿಯಾಗಿದ್ದು, ಇಬ್ಬರು ಅಂಗಡಿಯಲ್ಲಿದ್ದ ಹಣ ಮತ್ತು ವಸ್ತುಗಳನ್ನು ದೋಚಿದ್ದರೆ, ಮತ್ತಿಬ್ಬರು ಹೊರಗಡೆ ನಿಂತಿದ್ದಾರೆ. ಈ ಖತರ್ನಾಕ್ ಗುಂಪಿನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಗರದ ನ್ಯಾಯಾಲಯದ ಮುಂಭಾಗದಲ್ಲೇ ಬೆಳಗಿನ ಜಾವ ಅಪರಿಚಿತ ನಾಲ್ವರು ಯುವಕರು ನಡೆಸಿರುವ ಈ ಕಳ್ಳತನ ಬೆಚ್ಚಿ ಬೀಳುವಂತಿದೆ. ಇನ್ನು ಕಳ್ಳತನ ಮಾಡುವಾಗ ಯುವಕರು ನಡೆಸಿರುವ ಸಂಭಾಷಣೆಯೂ ಲಭ್ಯವಾಗಿದ್ದು, ಪೊಲೀಸ್ ಇಲಾಖೆಗೆ ನಿಂದಿಸುವ ಹಾಗೂ ಪರಸ್ಪರ ಅಶ್ಲೀಲವಾಗಿ ಬೈಯ್ದಾಡುವುದು ಸಹ ದಾಖಲಾಗಿದೆ.