ಹಣ, ಒಡವೆ ದೋಚಿದ್ದ ಕಳ್ಳರ ಬಂಧನ

Published on

ಹೊಸಕೋಟೆ: ಅನುಗೊಂಡನಹಳ್ಳಿ, ತಿರುಮಲ ಶೆಟ್ಟಿಹಳ್ಳಿ, ಹೊಸಕೋಟೆ ಟೌನ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಕಳವು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, 103 ಗ್ರಾಂ ಚಿನ್ನದೊಂದಿಗೆ 6 ಆರೋಪಿಗಳನ್ನು ಬಂಧಿಸಿದ್ದಾರೆ.

ಅನುಗೊಂಡನಹಳ್ಳಿ ಠಾಣಾ ವ್ಯಾಪ್ತಿಯ ಹಂದೇನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣ ಸಂಗ್ರಹಣ ಕೇಂದ್ರದ ಸಿಬ್ಬಂದಿಗೆ ಮಾರಕಾಸಗಳನ್ನು ತೋರಿಸಿ ಕಳವು ಮಾಡಿದ್ದ ಆರೋಪದಲ್ಲಿ ಸರ್ಜಾಪುರ ಬಳಿಯ ದ್ಯಾವಕನಹಳ್ಳಿಯ ಕಿರಣ್​(40), ಅಶೋಕ್​(43), ಮಧು(35), ಪ್ರವಿಣ್​(38), ಮನು(32), ಆಲಂಬಾಡಿ ಬಾಲಾಜಿ(33) ಎಂಬುವವರನ್ನು ಬಂಧಿಸಲಾಗಿದೆ.

ತಿರುಮಲ ಶೆಟ್ಟಿಹಳ್ಳಿ ಠಾಣಾ ವ್ಯಾಪ್ತಿಯ ನಡವತ್ತಿ ಗ್ರಾಮದ ರಸ್ತೆಯಲ್ಲಿ ಹೋಗುತ್ತಿದ್ದ ಗೌರಮ್ಮ(76) ಅವರ 68 ಗ್ರಾಂ ಚಿನ್ನದ ಸರ ಕಸಿದುಕೊಂಡು ಬೈಕ್​ನಲ್ಲಿ ಪರಾರಿಯಾಗಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಬಸವನಹಳ್ಳಿಯ ಅಶೋಕ್​(42)ನನ್ನು ಬಂಧಿಸಲಾಗಿದೆ.

ಈತನಿಂದ ಎರಡು ಬೈಕ್​ ಜಪ್ತಿ ಮಾಡಲಾಗಿದೆ. ಈತ ಒಟ್ಟು 23 ಸರಗಳವು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಹೊಸಕೋಟೆ ಟೌನ್​ ಠಾಣಾ ವ್ಯಾಪ್ತಿಯ ವಿನಾಯಕ ನಗರದಲ್ಲಿ 75 ಗ್ರಾಂ ಚಿನ್ನ ಕಳವು ಮಾಡಿದ್ದ ಆರೋಪದ ಮೇಲೆ ತಮಿಳುನಾಡು ಮೂಲದ ವಿಜಯ್​ ಕುಮಾರ್​(35) ಎಂಬಾತನನ್ನು ಬಂಧಿಸಿ ಚಿನ್ನ ಜಪ್ತಿ ಮಾಡಲಾಗಿದೆ. ಕಳವು ಪ್ರಕರಣ ಭೇದಿಸಿದ ಹೊಸಕೋಟೆ ಡಿವೈಎಸ್ಪಿ ಮಲ್ಲೆಶಯ್ಯ, ಪೊಲೀಸ್​ ಇನ್​ಸ್ಪೆಕ್ಟರ್​ಗಳಾದ ಬಿ ಎಂ.ಗೋವಿಂದ್​, ಬಿ.ಟಿ.ಗೋವಿಂದ್​, ಸುಂದರೇಶ್​ ತಂಡದ ಕಾರ್ಯಕ್ಕೆ ಎಸ್​ಪಿ ಸಿ.ಕೆ.ಬಾಬಾ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net