ರಾತ್ರೋರಾತ್ರಿ ಕೊಟ್ಟಿಗೆಯಲ್ಲಿನ ರಾಸುಗಳನ್ನು ಕದ್ದ ಕಳ್ಳರು

2
Published on

ಚಿಕ್ಕಬಳ್ಳಾಪುರ: ಬರದ ಹಿನ್ನೆಲೆಯಲ್ಲಿ ನೀರು ಮತ್ತು ಮೇವಿನ ಅಭಾವದ ಸಮಸ್ಯೆಯ ಜತೆಗೆ ನಿರ್ವಹಣೆ ವೆಚ್ಚದ ಹಿನ್ನೆಲೆಯಲ್ಲಿ ರಾಸುಗಳ ಸಾಕಾಣೆಗೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇದರ ನಡುವೆ ಕೊಟ್ಟಿಗೆಯಲ್ಲಿನ ಹಸು, ಕುರಿ, ಮೇಕೆಗಳು ರಾತ್ರೋರಾತ್ರಿ ಕಳವಾಗುತ್ತಿರುವುದು ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ.
ಬಾಗೇಪಲ್ಲಿ ತಾಲೂಕಿನ ನಲ್ಲಪ್ಪರೆಡ್ಡಿಹಳ್ಳಿಯಲ್ಲಿ ಎಂ.ವಿ.ಶಿವಾರೆಡ್ಡಿ ಎಂಬುವರಿಗೆ ಸೇರಿದ ೨ ಸೀಮೆಹಸುಗಳು ಕಳವಾಗಿದೆ. ಕೃಷಿ ಚಟುವಟಿಕೆಯ ಜತೆಗೆ ಹೈನುಗಾರಿಕೆಯನ್ನು ನೆಚ್ಚಿಕೊಂಡು ಜೀವ ಸಾಗಿಸುತ್ತಿದ್ದು ಎಂದಿನಂತೆ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಮೇಯಿಸಿಕೊಂಡು ಬಂದು ರಾತ್ರಿ ಕೊಟ್ಟಿಗೆಯಲ್ಲಿ ಸೀಮೆಹಸುಗಳನ್ನು ಕಟ್ಟಿಹಾಕಿದ್ದರು. ಬಳಿಕ ರಾತ್ರಿ ೧೦ ಗಂಟೆಯಲ್ಲಿ ಸ್ವಲ್ಪ ಮೇವು ಹಾಕಿ, ಮನೆಯಲ್ಲಿ ಮಲಗಿಕೊಂಡಿದ್ದು ಮಾರನೇಯ ದಿನ ಮುಂಜಾವ ೪ ರ ವೇಳೆ ಎದ್ದು ಬಂದು ನೋಡಲಾಗಿ ಕೊಟ್ಟಿಗೆಯಲ್ಲಿರುವ ೨ ಸೀಮೆಹಸುಗಳು ಕಾಣಿಸಿಲ್ಲ. ಸುತ್ತಲು ಹುಡುಕಾಡಿದರೂ ಪತ್ತೆಯಾಗಿಲ್ಲ. ರಾತ್ರಿ ಯಾರೋ ಕಳ್ಳರು ರಾಸುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಬಾಗೇಪಲ್ಲಿ ಠಾಣೆಯಲ್ಲಿ ರೈತ ದೂರು ದಾಖಲಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳ ಆಗಾಗ ಗ್ರಾಮಗಳಿಗೆ ತೆರಳಿ, ವಾಹನದಲ್ಲಿ ರಾಸುಗಳನ್ನು ಕದ್ದು ಮಾರುವಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಇದರ ಮೂಲಕ ಹಣ ಸಂಪಾದನೆಯ ದೊಡ್ಡ ದಂಧೆ ನಡೆಯುತ್ತಿದ್ದು ಕಷ್ಟಪಟ್ಟು ಸಾಕಿ ಸಲುಹಿದ ರಾಸುಗಳನ್ನು ಕಳೆದುಕೊಂಡು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇನ್ನು ಬ್ಯಾಂಕ್ ನೆರವಿನ ಹಣದಲ್ಲಿ ಖರೀದಿಸಿರುವುದರಿಂದ ಸಾಲಕ್ಕೆ ಸಿಲುಕುವಂತಾಗಿದೆ. ನೆರೆಯ ಆಂಧ್ರ ರಾಜ್ಯದ ಗಡಿಭಾಗದಲ್ಲಿರುವ ಕಳ್ಳರು, ಮಾಂಸ ಮಾರಾಟಗಾರರು ಈ ದುಷ್ಕೃತ್ಯವನ್ನೆಸುಗುತ್ತಿದ್ದು ರಾತ್ರೋರಾತ್ರಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net