

ಮದ್ದೂರು: ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಗೋದಾಮಿನಿಂದ ಖದೀಮರು 47 ಕ್ವಿಂಟಾಲ್ ಅಕ್ಕಿಯನ್ನು ಕಳವು ಮಾಡಿದ್ದಾರೆ.
ಸೋಮವಾರ ತಡರಾತ್ರಿ ಗೋದಾಮಿನ ಬೀಗ ಮುರಿದು ಒಳನುಗ್ಗಿರುವ ಕಳ್ಳರು 1 ಲಕ್ಷ ರೂ. ಮೊತ್ತದ ಅಕ್ಕಿ ಮೂಟೆಗಳನ್ನು ಕದ್ದೊಯ್ದಿದ್ದಾರೆ. ಅಕ್ಕಿ ಮೂಟೆಗಳನ್ನು ನ್ಯಾಯಬೆಲೆ ಅಂಗಡಿ, ಹಾಸ್ಟೆಲ್‌ಗಳು, ಸರ್ಕಾರಿ ಶಾಲೆಗೆ ಸರಬರಾಜು ಮಾಡಲು ಸಂಗ್ರಹಿಸಲಾಗಿತ್ತು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಿನಿ ಲಾರಿಯೊಂದಿಗೆ ಆಗಮಿಸಿದ ಕಳ್ಳರು ಗೋದಾಮಿನ ಬೀಗ ಮುರಿದು ಒಳನುಗ್ಗಿ ಅಕ್ಕಿ ಕದ್ದೊಯ್ದಿದ್ದಾರೆ.
ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ಆಹಾರ ನಾಗರಿಕ ಜಂಟಿ ನಿರ್ದೇಶಕ ಕೃಷ್ಣಕುಮಾರ್, ವೃತ್ತ ನಿರೀಕ್ಷಕ ಶಿವಕುಮಾರ್ ಆಗಮಿಸಿ ಸ್ಥಳ ಪರಿಶೀಲಿಸಿದರು. ಗೋದಾಮು ವ್ಯವಸ್ಥಾಪಕ ನಟರಾಜು ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.