

ಕಲಘಟಗಿ: ಪಟ್ಟಣದಲ್ಲಿ ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಪ್ರತಿವಾರ ಕನಿಷ್ಠ ನಾಲ್ಕೈದು ಜನರ ಕಿಸೆ(ಜೇಬು) ಕತ್ತರಿಸಿ ಹಣ, ಮೊಬೈಲ್ಪೋನ್ ಸೇರಿದಂತೆ ಮತ್ತಿತರ ವಸ್ತುಗಳನ್ನು ಕಳವು ಮಾಡುತ್ತಿರುವ ಘಟನೆ ಸರ್ವೆ ಸಾಮಾನ್ಯವಾಗಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ತಾಲೂಕಿನ ವಿವಿಧ ಗ್ರಾಮದಿಂದ ಸಾರ್ವಜನಿಕರು ಪಟ್ಟಣದಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಗೆ ಬರುತ್ತಾರೆ. ಅಲ್ಲಿ ಜನಸಂದಣಿಯಾಗುವಲ್ಲಿ ಕಳ್ಳರು ಬ್ಲೇಡ್ ಸಹಾಯದಿಂದ ಜೇಬುಗಳಿಗೆ ಕತ್ತರಿ ಹಾಕಿ ತಮ್ಮ ಕೈಚಳಕ ತೋರಿಸಿ ಕಾಲ್ಕಿಳುತ್ತಾರೆ.
ಈ ಬಾರಿಯ ಮಂಗಳವಾರದ ಸಂತೆಯಲ್ಲಿ ತಾಲೂಕಿನ ಮಲಕನಕೊಪ್ಪ ಗ್ರಾಮದ ವೃದ್ಧ ಬಸಯ್ಯ ತೋಟಯ್ಯ ಹಿರೇಮಠ ಎಂಬುವವರು ಸಂತೆಗೆ ಬಂದಿದ್ದ ವೇಳೆ ಕಳ್ಳರು ಅವರ ಕಿಸೆ ಕತ್ತರಿ ಪ್ರಯೋಗ ಮಾಡಿ 4200 ರೂ.ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಬಸವರಾಜ ತಿಪ್ಪಣ್ಣವರ ಎಂಬುವವರ ಜೇಬು ಕತ್ತರಿಸಿದ್ದ ಕಳ್ಳರು 20 ಸಾವಿರ ರೂ. ನಗದು, ಮೊಬೈಲ್ಫೋನ್ ಎಗರಿಸಿದ್ದರು. ಮಹಿಳೆಯೊಬ್ಬರ ಪಾಕೇಟ್ ಕದ್ದು ಅದರಲ್ಲಿದ್ದ 3 ಸಾವಿರ ಹಣವನ್ನು ದೋಚಿದ್ದರು. ಈ ಕುರಿತು ಕಲಘಟಗಿ ಪೊಲೀಸ್ ಠಾಣೆೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.