ಪೊಲೀಸರ ಸೋಗಿನಲ್ಲಿ ಬಂದ ಕಳ್ಳರು, ಅಂಗನವಾಡಿ ನಿವೃತ್ತ ಶಿಕ್ಷಕಿಯ ಸರ ಮಾಯ

Untitled-1 copy
Published on

ಚಿಕ್ಕಬಳ್ಳಾಪುರ: ಪೊಲೀಸರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಾನೆ.

ಬಳ್ಳಾರಿ ಜಿಲ್ಲೆಯ ಉಬ್ಬಳಗುಂಡಿ ಸುಗಮ್ಮ (65) ವಂಚನೆಗೊಳಗಾದವರು. ರಕ್ಷಣೆಯ ಸಲಹೆಗಳನ್ನು ನೀಡುವ ನೆಪದಲ್ಲಿ 45 ವರ್ಷದ ವ್ಯಕ್ತಿ 27 ಗ್ರಾಂ ತೂಕದ ಸರವನ್ನು ಕದ್ದು ಪರಾರಿಯಾಗಿದ್ದಾನೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಸಲಿಗೆ ನಡೆದಿದ್ದು ಏನೆಂದರೆ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಗ್ರಾಮದಲ್ಲಿರುವ ತಾಯಿಯ ಅಣ್ಣ ಮಗನ ಮನೆಯಲ್ಲಿ ವಾಸವಿದ್ದರು. ಕಳೆದ ಮೇ.28 ರಂದು ಮಧ್ಯಾಹ್ನ 2.30 ರ ವೇಳೆ ಚಿಕ್ಕಬಳ್ಳಾಪುರಕ್ಕೆ ಬರಲು ಆಟೋಗಾಗಿ ಕಾಯುತ್ತಿದ್ದರು. ಆಗ ದ್ವಿಚಕ್ರ ವಾಹನದಲ್ಲಿ ಇಬ್ಬರು ಇವರನ್ನು ನೋಡಿಕೊಂಡು ಸ್ವಲ್ಪ ಮುಂದೆ ಹೋಗಿದ್ದು ಅದರಲ್ಲಿ ಒಬ್ಬ ಮತ್ತೆ ವಾಪಸ್ ಬಂದಿದ್ದಾನೆ. ದ್ವಿಚಕ್ರ ವಾಹನದಲ್ಲಿ ನಮ್ಮ ಆಫೀಸರ್ ಇದ್ದಾರೆ, ಬಾ ಎಂದು ಸುಗಮ್ಮರನ್ನು ಕರೆದುಕೊಂಡು ಹೋಗಿದ್ದಾನೆ. ನಾವು ಪೊಲೀಸ್ ನವರು, ಇಲ್ಲಿ ಚೆಕಿಂಗ್ ಮಾಡಲು ನಮ್ಮನ್ನು ನಿಯೋಜಿಸಲಾಗಿದೆ. ಈ ರಸ್ತೆಯಲ್ಲಿ ಹಿಂದೆ ದೊಡ್ಡ ಗಲಾಟೆಯಾಗಿದೆ. ನೀವು, ಈ ರೀತಿಯಾಗಿ ಕತ್ತಿನಲ್ಲಿ ಆಭರಣಗಳನ್ನು ಹಾಕಿಕೊಂಡು ಓಡಾಡಬಾರದು ಎಂದು ಹೇಳಿದ್ದಾನೆ. ಕತ್ತಿನಲ್ಲಿದ್ದ 27ಗ್ರಾಂ ತೂಕದ 2 ಎಲೆ ಪದಕದ ಚೈನನ್ನು ಬಿಚ್ಚಿಸಿ, ಅವರ ಬಳಿ ಇದ್ದ ನ್ಯೂಸ್ ಪೇಪರಲ್ಲಿ ಹಾಕಿ, ಮುದುರಿಸಿ ಕೊಟ್ಟಿದ್ದಾನೆ. ತಕ್ಷಣ ಹೊರಟು ಹೋಗಿದ್ದಾನೆ. ಇದರಿಂದ ಅನುಮಾನಗೊಂಡು ಸುಗಮ್ಮ ಪರಿಶೀಲಿಸಿದಾಗ ಅದರಲ್ಲಿ ಸರ ಇರಲಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net