ಕಳ್ಳರಿಗೆ ವರ, ಬೈಕ್ ಮಾಲೀಕರಿಗೆ ಶಾಪ

21 BGV ravig 3-WEb
ಬೆಳಗಾವಿ ನಗರದ ಕಪಿಲೇಶ್ವರ ಕಾಲನಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್‌ನಿಂದ ಕಳ್ಳನೋರ್ವ ಪೆಟ್ರೋಲ್ ಕದಿಯುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
Published on

ಬೆಳಗಾವಿ: ದಿನೆ ದಿನೇ ಪೆಟ್ರೋಲ್ ದರ ಗಗನಕ್ಕೇರಿರುತ್ತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ನಷ್ಟ ಅನುಭವಿಸುತ್ತಿದ್ದರೆ, ಇತ್ತ ವಾಹನಗಳಿಗೆ ಭರಿಸಿದ ಪೆಟ್ರೋಲ್‌ಅನ್ನು ಕಳ್ಳರು ಕದ್ದೊಯ್ಯುತ್ತಿರುವುದು ಮತ್ತಷ್ಟು ಆತಂಕ ತಂದೊಡ್ಡಿದೆ.

‘ದುಬಾರಿ ದುನಿಯಾ’ದಿಂದ ತತ್ತರಿಸುತ್ತಿರುವ ಜನಸಾಮಾನ್ಯರು, ಚಿನ್ನಾಭರಣ ಜೋಪಾನವಾಗಿ ಡುವಂತೆಯೇ ಬೈಕ್‌ಗೆ ಹಾಕಿಸಿದ ಪೆಟ್ರೋಲ್ ರಕ್ಷಣೆಗೂ ಕಾವಲು ನಿಲ್ಲುವ ಸ್ಥಿತಿ ಬಂದಿದೆ. ಇಂಧನ ಬೆಲೆಯೇರಿಕೆ ಜನರಿಗೆ ಹೊರೆಯಾಗುತ್ತಿದ್ದರೆ, ಕಳ್ಳರಿಗೆ ಅದು ಆಸರೆಯಾಗತೊಡಗಿದೆ. ಬೈಕ್ ಹಾಗೂ ಇನ್ನಿತರ ವಾಹನ ಕದಿಯುತ್ತಿದ್ದ ಕಳ್ಳರೀಗ, ವಾಹನಗಳ ಟ್ಯಾಂಕ್‌ಗಳಲ್ಲಿರುವ ಪೆಟ್ರೋಲ್ ಕದಿಯತೊಡಗಿದ್ದಾರೆ. ಪ್ರತಿದಿನವೂ ನೂರಾರು ಲೀಟರ್ ಪೆಟ್ರೋಲ್ ಕದ್ದು ಸಂಗ್ರಹಿಸಿ ಅದನ್ನು ಲೀಟರ್ ದರಕ್ಕಿಂತ ನಾಲ್ಕೈದು ರೂಪಾಯಿ ಕಡಿಮೆ ದರಕ್ಕೆ ಮಾರಾಟ ಮಾಡಿ ದಿನವೂ ಸಾವಿರಾರು ರೂಪಾಯಿ ಆದಾಯ ಮಾಡಿಕೊಳ್ಳತೊಡಗಿದ್ದಾರೆ.

ಕಳ್ಳತನ ಹೇಗೆ?: ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಇಬ್ಬರು ಅಥವಾ ಮೂವರು ಕಳ್ಳರಿರುವ ತಂಡ ರಾತ್ರೋರಾತ್ರಿ ಆಗಮಿಸಿ, ಗೇಟ್‌ಗೆ ಬೀಗ ಹಾಕಿದ್ದರೂ ಅದನ್ನು ಹಾರಿ ಒಳ ಬರುತ್ತಾರೆ. ಅಂಗಳದಲ್ಲಿ ನಿಲ್ಲಿಸಿರುವ ಬೈಕ್‌ನಿಂದ ಸುಲಭವಾಗಿ ಪೆಟ್ರೋಲ್ ಕದಿಯತೊಡಗಿದ್ದಾರೆ. ಬೈಕ್‌ನ ಇಂಜಿನ್‌ಗೆ ಪೆಟ್ರೊಲ್ ಪೂರೈಸುವ ಪೈಪ್ ತೆಗೆದು ಬಾಟಲ್‌ಗಳಲ್ಲಿ ಪೆಟ್ರೋಲ್ ಸಂಗ್ರಹಿಸಿ ಕದ್ದೊಯ್ಯುತ್ತಿದ್ದಾರೆ. ನಗರದ ಕಪಿಲೇಶ್ವರ ಕಾಲನಿಯಲ್ಲಿ ಶನಿವಾರ ರಾತ್ರಿ ಒಟ್ಟು 10 ಬೈಕ್‌ಗಳ ಪೆಟ್ರೋಲ್ ಕದ್ದಿದ್ದಾರೆ. ಈ ದೃಶ್ಯ ಮನೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೆಂಪು ನೀರಿನ ಬಾಟಲಿಯನ್ನೂ ಹೊತ್ತೊಯ್ದರು!: ನಿಲ್ಲಿಸಿಟ್ಟ ವಾಹನಗಳಿಗೆ ನಾಯಿಗಳು ಮೂತ್ರ ಮಾಡುವುದರಿಂದ ಹಾಗೂ ಮನೆಯ ಗೇಟ್ ಮುಂಭಾಗದಲ್ಲಿಯೇ ಮಲ ವಿಸರ್ಜನೆ ಮಾಡುತ್ತದೆ ಎಂಬ ಕಾರಣದಿಂದ ಬೆಳಗಾವಿಯಲ್ಲಿ ಕೆಂಪು ನೀರನ್ನು ಬಾಟಲಿಯೊಂದರಲ್ಲಿ ಹಾಕಿ ಇಡುವ ಪದ್ಧತಿ ಇದೆ. ಈ ಬಾಟಲಿ ಕಂಡರೆ ನಾಯಿಗಳು ಹತ್ತಿರ ಬರುವುದಿಲ್ಲ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಆದರೆ, ಪೆಟ್ರೊಲ್ ಕದಿಯಲು ಬಂದಿದ್ದ ಕಳ್ಳರು, ಬಾಟಲಿಯೊಳಗೆ ಕೆಂಪು ಬಣ್ಣದ ದ್ರವ ಇರುವುದರಿಂದ ಅದು ಪೆಟ್ರೋಲ್ ಎಂದು ಭಾವಿಸಿ ಅದನ್ನೂ ಕದ್ದೊಯ್ದಿದ್ದಾರೆ. ಈ ದೃಶ್ಯವೂ ಸಹ ಬೆಳಗಾವಿಯ ಕಪಿಲೇಶ್ವರ ಕಾಲನಿಯ ಇನ್ನೋರ್ವರ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯಿಂದ ತಿಳಿದುಬಂದಿದೆ.

ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಲ್ಲಿ

ಬೈಕ್‌ಗಳಲ್ಲಿನ ಪೆಟ್ರೋಲ್ ಕಳ್ಳತನ ನಡೆಯುತ್ತಿದೆ ಎಂಬ ಮಾಹಿತಿ ಇತ್ತು. ಹೀಗಾಗಿ ಪಾರ್ಕಿಂಗ್ ಸ್ಥಳದಲ್ಲೂ ಒಂದು ಸಿಸಿ ಕ್ಯಾಮರಾ ಅಳವಡಿಸಿದ್ದೆ. ಶನಿವಾರ ರಾತ್ರಿ ಇಬ್ಬರು ಕಳ್ಳರು ಬಂದು ಪೆಟ್ರೋಲ್ ಕದ್ದೊಯ್ದಿರುವುದು ಸೆರೆಯಾಗಿದೆ. ಶನಿವಾರ ಮನೆಗೆ ಬರುವಾಗ ಬೈಕ್‌ಗೆ 5 ಲೀಟರ್ ಪೆಟ್ರೋಲ್ ಹಾಕಿಸಿದ್ದೆ. ಆದರೆ, ಶನಿವಾರ ರಾತ್ರಿ ನನ್ನ ಬೈಕ್‌ನಿಂದಲೂ ಕಳ್ಳರು ಪೆಟ್ರೋಲ್ ಕದ್ದಿದ್ದಾರೆ. ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸ್‌ಗೆ ದೂರು ನೀಡಲಿದ್ದೇನೆ.
ಶಿವಾನಂದ ಹೊರಟ್ಟಿ ಬೆಳಗಾವಿ ನಿವಾಸಿ

| ಜಿತೇಂದ್ರ ಕಾಂಬಳೆ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net