

ಚಿಂತಾಮಣಿ: ಟೊಮ್ಯಾಟೊ ಬೆಲೆ ಗಗನಕ್ಕೇರಿರುವುದು ಬೆಳೆಗಾರರಲ್ಲಿ ಸಂತಸದ ಜತೆಗೆ ಫಸಲನ್ನು ಖದೀಮರಿಂದ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ತೋಟಗಳಲ್ಲಿಯೇ ಟೊಮ್ಯಾಟೊ ಬ್ಯಾಕ್ಸ್‌ಗಳನ್ನು ಕಳವು ಮಾಡಿದ್ದ ಪ್ರಕರಣದ ಬೆನ್ನಲ್ಲೆ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಹರಾಜಿಗೆ ಇಟ್ಟಿದ್ದ ಟೊಮ್ಯಾಟೊ ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಮಿಟಗಾನಹಳ್ಳಿ ರೈತ ನವೀನ್ ನಗರದ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿ ಎ.ಅರ್.ಕೆ. ರವಿ ಎಂಬುವರ ಟೊಮ್ಯಾಟೊ ಮಂಡಿಗೆ ಹರಾಜಿಗಾಗಿ ಬುಧವಾರ ತಂದಿರಿಸಿದ್ದ ಟೊಮ್ಯಾಟೊ ಬಾಕ್ಸ್‌ಗಳಿಗೆ ಪ್ಲಾಸ್ಟಿಕ್ ಹೊದಿಕೆ ಮುಚ್ಚಿ ಹಗ್ಗದಿಂದ ಕಟ್ಟಿ ಬಂದೋಬಸ್ತ್ ಮಾಡಿದ್ದರು. ಬೆಲೆ ಏರಿಕೆಯಿಂದ ಬಂಗಾರದಂತಾಗಿರುವ ಟೊಮ್ಯಾಟೊ ಮೇಲೆ ಕಣ್ಣು ಹಾಕಿದ ಖದೀಮರು ಮಧ್ಯರಾತ್ರಿ ಹಗ್ಗ ಮತ್ತು ಪ್ಲಾಸ್ಟಿಕ್ ಹೊದಿಕೆ ಬಿಚ್ಚಿ ಕಳವು ಮಾಡಿದ್ದು ಹಣ್ಣನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳೆದ ತಿಂಗಳು ತಾಲೂಕಿನ ಕುರುಬೂರಿನ ರೈತ ತಿಪ್ಪನಾಯಕ ಮಾರುಕಟ್ಟೆಗೆ ಸಾಗಿಲು ಟೊಮ್ಯಾಟೊ ತುಂಬಿ ತೋಟದ ಬಳಿ ಇಟ್ಟಿದ್ದ ಬಾಕ್ಸ್‌ಗಳನ್ನು ಖದೀಮರು ದೋಚಿದ್ದರು. ಕಳೆದವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ರಾತ್ರಿ ವೇಳೆ ಟೊಮ್ಯಾಟೊ ಕಳವು ಮಾಡುತ್ತಿದ್ದವರನ್ನು ಅಂಗಡಿ ಮಾಲೀಕರೆ ಪತ್ತೆ ಹಚ್ಚಿ ಬಾಕ್ಸ್‌ಗಳ ಸಮೇತ ಹಿಡಿದು ಬುದ್ದಿ ಕಲಿಸಿದ್ದರು.
ಟೊಮ್ಯಾಟೊ ವ್ಯಾಪಾರಿ ಹಾಕಿಸಿರುವ ಸಿಸಿ ಕ್ಯಾಮರಾ ಬಿಟ್ಟರೆ ಮಾರುಕಟ್ಟೆಯಲ್ಲಿ ಎಲ್ಲಿಯೂ ಕ್ಯಾಮರಾಗಳು ಇಲ್ಲ, ಎಪಿಎಂಸಿ ವತಿಯಿಂದ ಕ್ಯಾಮರಾಗಳನ್ನು ಅಳವಡಿಸಿದ್ದರೆ ಇಂತಹ ಕಳವುಗಳನ್ನು ತಡೆಯಬಹುದಿತ್ತು. ರವಿಚಂದ್ರಾರೆಡ್ಡಿ ಮದ್ದಲಹಳ್ಳಿ ರೈತ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬಾಕ್ಸ್‌ಗಳು, ಖಾಲಿ ಪ್ಲಾಸ್ಟಿಕ್ ಕ್ರೇಟ್‌ಗಳು ಕಳವುವಾಗುತ್ತಿರುವ ದೂರುಗಳು ಬರುತ್ತಿವೆ ಎಲ್ಲ ವ್ಯಾಪಾರಿಗಳು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು, ಜತೆಗೆ ಮಾರುಕಟ್ಟೆಯಿಂದ ಆಯ್ದ ಸ್ಥಳದಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಲಾಗುವುದು. ಗಂಡ್ರಗಾನಹಳ್ಳಿ ಶ್ರೀರಾಮರೆಡ್ಡಿ ಎಪಿಎಂಸಿ ಅಧ್ಯಕ್ಷ
ಚೆಕ್‌ಪೋಸ್ಟ್ ಇದ್ದರೂ ವೇಸ್ಟ್: ಮಾರುಕಟ್ಟೆಗೆ ಪ್ರವೇಶಿಸುವ ವಾಹನಗಳು ಮಾಹಿತಿ, ಟೋಕನ್ ನೀಡಲು ಟೊಮ್ಯಾಟೊ ಮಾರುಕಟ್ಟೆ ಪ್ರವೇಶದಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಆದರೆ ಇಲ್ಲ ಸಿಬ್ಬಂದಿ, ಸೆಕ್ಯೂರಿಟಿಯಾಗಲಿ ಇಲ್ಲ. ರೈತರು ಕಷ್ಟುಪಟ್ಟು ಬೆಳೆದ ಸಲನ್ನು ಮಾರುಕಟ್ಟೆಗೆ ತಂದರೆ ಇಲ್ಲಿ ಯಾವುದೇ ಭದ್ರತೆ ಇಲ್ಲದಾಗಿದೆ. ಇದೇ ಭಯ ವ್ಯಾಪಾರಸ್ಥರನ್ನೂ ಕಾಡುತ್ತಿದೆ. ಯಾರೇ ಬಂದರು, ಹೋದರೂ ಹೇಳೋರು, ಕೇಳೋರೇ ಇಲ್ಲ ಎನ್ನುತ್ತಾರೆ ರೈತರು ಹಾಗೂ ವ್ಯಾಪಾರಸ್ಥರು.