ಮನೆಯವರು ನಿದ್ರಿಸುತ್ತಿರುವಾಗಲೇ ಮನೆಯೊಳಗೆ ಕಳ್ಳರ ಎಂಟ್ರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿ 24 ಗಂಟೆಯೊಳಗೆ ಬೆಂಗಳೂರಿನಲ್ಲಿ ಹೆಡೆಮುರಿ ಕಟ್ಟಿದ ಖಾಕಿ

mng--21 Oct Urva Theft
Published on

ಮಂಗಳೂರು: ನಗರದ ಲಾಲ್‌ಭಾಗ್ ಬಳಿಯ ಹ್ಯಾಟ್‌ಹಿಲ್‌ನ ಅಪಾರ್ಟ್ ಮೆಂಟ್‌ವೊಂದರ ಮೂರು ಮನೆಗಳಿಂದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 5,000 ರೂ. ನಗದು, 3,000 ದಿರಮ್ ವಿದೇಶಿ ಕರೆನ್ಸಿ ಹಾಗೂ ಮೊಬೈಲ್ ಫೋನ್ ನ್ನು ಕಳ್ಳತನ ಮಾಡಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಉರ್ವ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಸ್ಸಾಂನ ಕಾಚಾರ್ ಜಿಲ್ಲೆ ಮೆಹೆರ್ ಪುರ್ ಗ್ರಾಮ ಅಂಬಿಕಾ ಪುರ್ ಪಾರ್ಟ್ -10 ಮೇಡಿನೋವಾ ರಸ್ತೆ ಪಾಂಚಗೋರಿ ನಿವಾಸಿ ಅಭಿಜಿತ್ ದಾಸ್ (24) ಹಾಗೂ ಮೆಹೆರ್ ಪುರ್ ಗ್ರಾಮದ ಶ್ರೀ ದುರ್ಗಾ ಮಂದಿರ ಬಳಿಯ ನಿವಾಸಿ ದೇಬಾ ದಾಸ್ (21) ಬಂಧಿತ ಆರೋಪಿಗಳು.

 ಪ್ರಕರಣದ ವಿವರ: ಅ.19 ರಂದು ತಡರಾತ್ರಿ ಆರೋಪಿಗಳು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮದ ಲಾಲ್‌ಬಾಗ್ ಹ್ಯಾಟ್ ಹಿಲ್ ನ ಅಪಾರ್ಟ್ ಮೆಂಟ್‌ವೊಂದರ 3 ಮನೆಗಳಿಗೆ ನುಗ್ಗಿದ್ದರು. ಅಪಾರ್ಟ್ ಮೆಂಟ್ ನ ಅವರಣ ಗೋಡೆ ಹಾರಿ ಒಳಗೆ ಪ್ರವೇಶಿಸಿದ ಆರೋಪಿಗಳು ಮನೆಗಳ ಅಡುಗೆ ಕೋಣೆಯ ಸಣ್ಣ ಕಿಟಕಿಯ ಮೂಲಕ ಮನೆಗಳ ಒಳಗೆ ನುಗ್ಗಿದ್ದರು. ಬಳಿಕ ಒಂದರ ನಂತರ ಒಂದರಂತೆ ಮೂರು ಮನೆಗಳಲ್ಲಿ ಕಳ್ಳತನ ಮಾಡಿ ಅಲ್ಲಿಂದ ಪರಾರಿಯಾಗಿದ್ದರು. ಮನೆಯಲ್ಲಿದ್ದವರು ಮಲಗಿರುವಂತೆಯೇ ಕಳವು ಮಾಡಿದ್ದರು. ಈ ಬಗ್ಗೆ ರಿಯಾಜ್ ರಶೀದ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.

ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಉರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಸಿಬಂದಿ ಹಾಗೂ ಶ್ವಾನ ದಳ ಹಾಗೂ ಫಿಂಗರ್ ಪ್ರಿಂಟ್ ತಜ್ಞರ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದರು. ಪ್ರಕರಣ ದಾಖಲಾಗಿ ಸುಮಾರು 20 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 ಬೆಂಗಳೂರಿನಲ್ಲಿ ಬಂಧನ

ಅಪರಾಧ ವಿಭಾಗದ ಡಿಸಿಪಿಯರವರ ಮೇಲ್ವಿಚಾರಣೆಯಲ್ಲಿ ಕೇಂದ್ರ ಉಪ ವಿಭಾಗದ ಎಸಿಪಿ ನಿರ್ದೇಶನದಂತೆ ಉರ್ವ ಪೊಲೀಸ್ ಠಾಣೆ ನಿರೀಕ್ಷಕರು ಮತ್ತು ಸಿಬಂದಿ, ಬೆಂಗಳೂರು ನಗರ ಪೊಲೀಸರ ಸಹಕಾರದಿಂದ ಅ.21ರಂದು ಮುಂಜಾನೆ ಬೆಂಗಳೂರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಳ್ಳತನ ಮಾಡಿದ ಎಲ್ಲ ಚಿನ್ನಾಭರಣ, 5,000 ರೂ. ನಗದು, 70,000 ರೂ. ಮೌಲ್ಯದ 3,000 ದಿರಮ್ ವಿದೇಶಿ ಕರೆನ್ಸಿ ಹಾಗೂ ಮೊಬೈಲ್ ಫೋನ್ ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ.

  ಅಭಿಜಿತ್ ವಿರುದ್ಧ ಹಲವು ಪ್ರಕರಣ

ಆರೋಪಿ ಅಭಿಜಿತ್ ದಾಸ್ ನ ಮೇಲೆ ಈ ಮೊದಲು ಬೆಂಗಳೂರು ನಗರ ಮತ್ತು ಅಸ್ಸಾಂ ಸೇರಿದಂತೆ ಹಲವು ಕಡೆಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಲಾಗುವುದು. ಇತರ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net