

ಉಡುಪಿ: ಒಂಟಿ ಮನೆಗಿಂತ ಅಪಾರ್ಟ್ಮೆಂಟ್ನಲ್ಲಿ ವಾಸ್ತವ್ಯ ಮಾಡುವುದು ಹೆಚ್ಚು ಸುರಕ್ಷತೆ ಹಾಗೂ ಭದ್ರತೆ ಎಂದುಕೊಂಡಿದ್ದ ನಿವಾಸಿಗಳಿಗೂ ಸಹ ಇದೀಗ ಕಳ್ಳರ ಭೀತಿ ಎದುರಾಗಿದೆ.
ಉಡುಪಿ ನಗರದ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್ಮೆಂಟ್ಗೆ ನುಗ್ಗಿದ ಕಳ್ಳರ ತಂಡ, ಕಳ್ಳತನ ನಡೆಸಲು ವಿಫಲ ಯತ್ನಿಸಿದ್ದು, ಆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಗರದಲ್ಲಿರುವ ಪ್ರಮುಖ ಅಪಾರ್ಟ್ಮೆಂಟ್ಗೆ ಆ.1ರ ನಸುಕಿನಲ್ಲಿ ನುಗ್ಗಿದ ನಾಲ್ವರು ಕಳ್ಳರು, ಕಬ್ಬಿಣದ ಸಲಾಕೆ ಹಿಡಿದು ಪ್ಲ್ಯಾಟ್ನ ಬಾಗಿಲು ಒಡೆಯಲು ಯತ್ನಿಸಿದ್ದಾರೆ. ತಮ್ಮ ಗುರುತು ಸಿಗಬಾರದೆಂದು ಎಲ್ಲ ಕಳ್ಳರೂ ಮುಖಕ್ಕೆ ಮುಸುಕು ಧರಿಸಿದ್ದರು. ಇದೇ ತಂಡ ಬ್ರಹ್ಮಗಿರಿ ಭಾಗದ ಮೂರು ಅಪಾರ್ಟ್ಮೆಂಟ್ಗಳಲ್ಲಿಯೂ ಸಹ ಕಳ್ಳತನಕ್ಕೆ ಯತ್ನಿಸಿದ್ದರು ಎಂಬ ಮಾಹಿತಿ ಲಭಿಸಿದೆ.
ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗಕ್ಕೆ ಅನ್ಯ ರಾಜ್ಯದ ಕಾರ್ಮಿಕರು ಬೃಹತ್ ಕಟ್ಟಡ ನಿರ್ಮಾಣ ಹಾಗೂ ಇನ್ನಿತರ ಕೂಲಿ ಕೆಲಸಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅವರ ಚಲನ- ವಲನದ ಬಗ್ಗೆ ಸಂಬಂದಪಟ್ಟವರು ನಿಗಾ ಇಡುವಂತೆ ಹಾಗೂ ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಇಲ್ಲದಿದ್ದಲ್ಲಿ ಜನರ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇದ್ದು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿಯ ನಾಗರಿಕರು ಒತ್ತಾಯಿಸಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಲಾಗಿದ್ದು, ಕಳ್ಳರು ಸ್ಥಳೀಯರೋ ಅಥವಾ ಹೊರಗಿನವರೋ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಕುರಿತು ತನಿಖೆ ನಡೆಸಲು ತಂಡ ರಚಿಸಲಾಗಿದೆ. | ಡಾ.ಅರುಣಕುಮಾರ್ ಕೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ