

ಬಂಕಾಪುರ: ಬಾರ್ ಹಾಗೂ ಅಂಗಡಿಗಳ ಶಟರ್ಸ್ ಮುರಿದು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಬಂಕಾಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಬ್ಬಿನಹಳ್ಳಿಯ ಜಗದೀಶ ಕೆ. ಬಂಧಿತ. ಮಾ. ೧೮ರಂದು ಬಂಕಾಪುರ ಪಟ್ಟಣದ ಮಾಲತೇಶ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಶಟರ್ಸ್ ಮುರಿದು ಕಳವು ಮಾಡಿದ ಕುರಿತು ದೂರು ದಾಖಲಾಗಿತ್ತು. ಪ್ರಕರಣದ ತನಿಖೆಯಲ್ಲಿದ್ದ ಪೊಲೀಸರಿಗೆ ಹಾವೇರಿ-ಬಂಕಾಪುರ ರಸ್ತೆಯ ಪೊಲೀಸ್ ಠಾಣೆ ಎದುರು ವಾಹನ ಪರಿಶೀಲನೆ ಸಮಯದಲ್ಲಿ ಅನುಮಾನಾಸ್ಪದವಾಗಿ ವರ್ತಿಸಿದ ಜಗದೀಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕಾರ್ ಬಾಡಿಗೆ ಪಡೆದು ಕಳ್ಳತನಕ್ಕೆ ಬಳಸುತ್ತಿದ್ದ ಆರೋಪಿ ಜಗದೀಶ ಕೆ., ಬಂಕಾಪುರ ಸೇರಿದಂತೆ ಹಾವೇರಿ ಜಿಲ್ಲೆಯ ಕಾಕೋಳ, ಕಜ್ಜರಿ ಗ್ರಾಮ ವ್ಯಾಪ್ತಿಯಲ್ಲಿ ಬಾರ್‌ಗಳಲ್ಲಿ ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಈತನ ಮೇಲೆ ರಾಜ್ಯದ ಬೇರೆ ಬೇರೆ ಠಾಣೆಗಳಲ್ಲಿ ೫೪ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.
ಬಂಧಿತನಿಂದ ಕಳ್ಳತನಕ್ಕೆ ಬಳಸುತ್ತಿದ್ದ ಕಾರ್, ಎರಡು ಕಬ್ಬಿನದ ಹಾರೆ, ಒಂದು ಕಬ್ಬಿಣದ ಕೊಯತಾ, ಒಂದು ಎಂ.ಎಸ್. ಮೆಟಲ್ ಇಂಚ್ ಸೆಟ್, ಒಂದು ಬ್ಯಾಟರಿ ಚಾಲಿತ ಕಟರ್ ಮಷಿನ್, ಒಂದು ಶೆಲ್, ಆರು ಮೊಬೈಲ್ ಮತ್ತು ಒಂದು ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಪಿಐ ಅನಿಲ ರಾಠೋಡ್, ಪಿಎಸ್‌ಐ ನಿಂಗರಾಜ ಕರಕನ್ನವರ, ಎಂ.ಎಸ್. ವನಹಳ್ಳಿ, ಸಿಬ್ಬಂದಿ ಎ.ಕೆ. ನದಾಫ್, ವೆಂಕಟೇಶ ಲಮಾಣಿ, ಗೋವಿಂದ ಲಮಾಣಿ, ಬೀರಪ್ಪ ಕಳ್ಳಿಮನಿ, ಕರಬಸಪ್ಪ ಹಾವಣಗಿ, ಸತೀಶ ಮಾರಕಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.