ಮೈಸೂರಿನಲ್ಲಿ ಐಟಿ ಉದ್ಯೋಗಿಗಳ ಲ್ಯಾಪ್'ಟಾಪ್ ಕದಿಯುತ್ತಿದ್ದ ಕಳ್ಳನ ಬಂಧನ

cybe crime
Published on

ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಿಂಗಳ ಹಿಂದೆ 7 ಲ್ಯಾಪ್‌ಟಾಪ್, 3 ಮೊಬೈಲ್‌ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಬ್ಬಾಳ್ ಕೈಗಾರಿಕಾ ಪ್ರದೇಶದ ಕೆಐಎಡಿಬಿ ಬಡಾವಣೆಯಲ್ಲಿರುವ ಈಜಿ ಲಿವಿಂಗ್ ಪಿಜಿ ರೂಂಗಳಲ್ಲಿ, ಮಾದೇಗೌಡ ವೃತ್ತದ 5ನೇ ಕ್ರಾಸ್ ಮನೆಯೊಂದರಲ್ಲಿ ಮತ್ತು ಹೆಬ್ಬಾಳ್ 1ನೇ ಹಂತದ ಅಪೂರ್ವ ಬಾರ್ ಪಕ್ಕದ 8ನೇ ಕ್ರಾಸ್‌ನ ಮನೆಯೊಂದರಲ್ಲಿ ಒಟ್ಟು 7 ಲ್ಯಾಪ್‌ಟಾಪ್ ಮತ್ತು 3 ಮೊಬೈಲ್‌ಗಳು ಮೇ 25 ರಂದು ಕಳುವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹೆಬ್ಬಾಳ್ ಠಾಣೆ ಪೊಲೀಸರು ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಯಿತು.

ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಜೂ.6 ರಂದು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಆರೋಪಿ ಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತ ಆರೋಪಿಯು ಮತ್ತೊಬ್ಬ ಆರೋಪಿಯೊಂದಿಗೆ ಸೇರಿಕೊಂಡು ಐಟಿ ಉದ್ಯೋಗಿಗಳು ವಾಸವಿರುವ ಪಿಜಿಗಳು ಹಾಗೂ ಮನೆಗಳಲ್ಲಿ ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ. ಆರೋಪಿಯಿಂದ ಒಟ್ಟು 2.22 ಲಕ್ಷ ರೂ. ಮೌಲ್ಯದ 7 ಲ್ಯಾಪ್‌ಟಾಪ್, 2 ಮೊಬೈಲ್‌ಗಳು ಹಾಗೂ 2,000 ರೂ. ನಗದು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.

ಡಿಸಿಪಿ ಎಸ್. ಜಾಹ್ನವಿ ಮಾರ್ಗದರ್ಶನದಲ್ಲಿ ವಿಜಯನಗರ ಉಪ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಬ್ಬಾಳ್ ಠಾಣೆಯ ಇನ್ಸ್‌ಪೆಕ್ಟರ್ ಇ.ವಿ. ವಿನಯ್, ಪಿಎಸ್‌ಐ ಕೆ.ಎಸ್. ಭಾಸ್ಕರ್, ಎಎಸ್‌ಐ ಆರ್.ಟಿ. ಗಣೇಶ್, ಸಿಬ್ಬಂದಿ ರವಿಕುಮಾರ್, ವೀರಭದ್ರಯ್ಯ, ಹರೀಶ್, ಎನ್. ವೆಂಕಟೇಶ್, ಮಹೇಶ್ ಹೊಸಮನಿ, ಸುಭಾನಲ್ಲಾ ಬಾಲ್‌ದಾರ್, ಅವಿನಾಶ್, ತಾಂತ್ರಿಕ ವಿಭಾಗದ ಪಿ. ಕುಮಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net