

ಶಿವಮೊಗ್ಗ: ಬಾಪೂಜಿನಗರದ 8ನೇ ಕ್ರಾಸ್‌ನಲ್ಲಿ ಶನಿವಾರ ರಾತ್ರಿ ನಡೆದ ಕಳ್ಳ ಸೂರಿ ಅಲಿಯಾಸ್ ಸುರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದವನ ಅಪ್ರಾಪ್ತ ಪುತ್ರ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಪೂಜಿನಗರದ ರಾಕೇಶ್(26), ಪ್ರವೀಣ್(22) ಮತ್ತು 17 ವರ್ಷದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಲಾಗಿದೆ. ಕಳ್ಳ ಸೂರಿ ನಿತ್ಯವೂ ಮದ್ಯ ಸೇವಿಸಿ ಬಂದು ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ರೋಸಿ ಹೋಗದ್ದ 17 ವರ್ಷದ ಪುತ್ರ, ಅದೇ ಬಡಾವಣೆಗೆ ರಾಕೇಶ್ ಮತ್ತು ಪ್ರವೀಣ್ ಜತೆ ಸೇರಿಕೊಂಡು ಬುದ್ದಿ ಕಲಿಸಲು ಬ್ಯಾಟ್ ಮತ್ತು ವಿಕೆಟ್‌ನಿಂದ ಹಲ್ಲೆ ಮಾಡಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಳ್ಳ ಸೂರಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದ ಕೋಟೆ ಠಾಣೆ ಪೊಲೀಸರು, ಕಳ್ಳ ಸೂರಿಯ ಪುತ್ರ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ರಾಕೇಶ್ ಮತ್ತು ಪ್ರವೀಣ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ, 17 ವರ್ಷದ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಕಳ್ಳ ಸೂರಿ ಮೇಲೆ ನಗರದ ವಿವಿಧೆಡೆ 7-8 ಮನೆಗಳ್ಳತನದ ಪ್ರಕರಣಗಳಿದ್ದವು.
ಪತ್ನಿ-ಮಕ್ಕಳಿಂದ ದೂರ ಇದ್ದ !
ಕೌಟುಂಬಿಕ ಕಲಹದಿಂದ ಕಳ್ಳ ಸೂರಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪತ್ನಿ ಮತ್ತು ಮಕ್ಕಳಿಂದ ದೂರ ಉಳಿದಿದ್ದ. ಆದರೂ ಮನೆ ಬಳಿ ಬಂದು ಗಲಾಟೆ ಮಾಡಿ, ಹಲ್ಲೆ ಮಾಡಿ ಹೋಗುತ್ತಿದ್ದ. ಮನೆಗಳ್ಳ್ಳತನದ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ ಆತ 20 ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಹೊರ ಬಂದು ಬಾಪೂಜಿನಗರ 7ನೇ ಕ್ರಾಸಿನಲ್ಲಿದ್ದ ತನ್ನ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದ. ಆನಂತರ ಎಂಟತ್ತು ದಿನಗಳ ಹಿಂದೆ ದೊಡ್ಡಮ್ಮನ ಬಳಿಯೂ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ.