ಕಳ್ಳನ ಬಂಧನ

VJP 20-4
Published on

ವಿಜಯಪುರ: ಡೊಮನಾಳ ತಾಂಡಾ ನಂ. 2ರಲ್ಲಿ ಈಚೆಗೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿರುವ ಪೊಲೀಸರು, ಆತನಿಂದ 6 ಲಕ್ಷ ರೂ. ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ನಿವಾಸಿ ಕಿರಣ ವಾಚು ರಾಠೋಡ (26) ಬಂಧಿತ ಆರೋಪಿ. ಕಳೆದ ವರ್ಷ ನ.22 ರಂದು ರಾತ್ರಿ 7 ರಿಂದ ನ. 23ರ ಬೆಳಗ್ಗೆ 9ರ ನಡುವಿನ ಸಮಯದಲ್ಲಿ ಅನೀಲ ರಾಠೋಡ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆ ಬಾಗಿಲ ಕೀಲಿ ಮುರಿದು ಒಳಗೆ ಹೊಕ್ಕು ಪಡಸಾಲೆಯಲ್ಲಿದ್ದ ಟ್ರೇಜರಿ ಮುರಿದು 116 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು.

ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‌ಪಿ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನದಲ್ಲಿ ಪ್ರಕರಣ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಸದರಿ ತಂಡದ ಚುರುಕಿನ ಕಾರ್ಯಾಚರಣೆ ಫಲವಾಗಿ ಆರೋಪಿ ಬಂಧಿಯಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ತಂಡದಲ್ಲಿ ಎಎಸ್‌ಪಿ ಡಾ.ರಾಮ್ ಎಲ್.ಅರಸಿದ್ದಿ, ಡಿವೈಎಸ್‌ಪಿ ಕೆ.ಸಿ. ಲಕ್ಷ್ಮಿನಾರಾಯಣ, ಸಿಪಿಐ ಸಂಗಮೇಶ ಪಾಲಭಾವಿ, ಪಿಎಸ್‌ಐ ಆನಂದ ಠಕ್ಕಣ್ಣನವರ, ಆರ್.ಎ. ದಿನ್ನಿ ಮತ್ತಿತರರು ಇದ್ದರು. ಸದರಿ ತಂಡಕ್ಕೆ ಪ್ರಶಂಸನಾ ಪತ್ರದೊಂದಿಗೆ ಬಹುಮಾನ ಘೋಷಿಸಿದ್ದಾಗಿ ಎಸ್‌ಪಿ ಅನುಪಮ್ ಅಗರವಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net