

ಬ್ರಹ್ಮಾವರ: ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಕನ್ನಾರು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ವಾಸು ಪೂಜಾರಿ ಅವರ ಪತ್ನಿ ಪ್ರೇಮಾ ಎಂಬುವರ 10 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಕಳವುಗೈದ ಆರೋಪಿ ಮೂಲತಃ ಬ್ರಹ್ಮಾವರದ ಪ್ರಸ್ತುತ ಬೆಂಗಳೂರಿನ ಯಶವಂತಪುರದ ನಿವಾಸಿ ಸುರೇಶ್ ಸೂರ್ಯ ಕಪಿ (31) ಎಂಬಾತನನ್ನು ಪ್ರಕರಣ ನಡೆದ 24 ಗಂಟೆಯೊಳಗೆ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಪ್ರೇಮಾ ಮನೆಯಲ್ಲಿ ಒಂಟಿಯಾಗಿದ್ದು, ಮನೆಯ ಹೊರಗಡೆ ಪಾತ್ರೆ ತೊಳೆಯುವಾಗ ಹಿಂಬದಿ ಬಾಗಿಲ ಚಿಲಕ ಮುರಿದು ಒಳನುಗ್ಗಿದ ಆರೋಪಿ 10 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಕಳವು ಮಾಡಿ ಹೋಗುವುದನ್ನು ಗಮನಿಸಿದ ಪ್ರೇಮಾ ಪತಿಗೆ ತಿಳಿಸಿ ಬ್ರಹ್ಮಾವರ ಠಾಣೆಯಲ್ಲಿ ಹಗಲು ಕನ್ನ ಕಳವು ಪ್ರಕರಣ ದಾಖಲಿಸಿದರು.
ಪ್ರಕರಣದ ಬೆನ್ನು ಬಿದ್ದ ಪೊಲೀಸರು, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಮಾರ್ಗದರ್ಶನದಂತೆ ಪಿ.ಎಸ್‌ಐ. ಗುರುನಾಥ ಬಿ ಹಾದಿಮನಿ ಹಾಗೂ ಪಿ.ಎಸ್.ಐ ಮುಕ್ತಾಬಾಯಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯನ್ನು ಪತ್ತೆ ಮಾಡಿ ನೆಕ್ಲೇಸ್ ವಶಪಡಿಸಿಕೊಂಡಿದ್ದಾರೆ. ಆರೋಪಿಯೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಕಳ್ಳತನದ ಪ್ರಕರಣದ ಆರೋಪಿಯಾಗಿದ್ದ. ಈತ ಅಪ್ರಾಪ್ತ ಹರೆಯದಲ್ಲಿ ಅಪರಾಧ ಪ್ರಕರಣದಲ್ಲಿ 7 ವರ್ಷ ರಿಮ್ಯಾಂಡ್ ಹೋಮ್ನಲ್ಲಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಸ್ತುತ ಬೆಂಗಳೂರಿನ ಬಿ.ಬಿಎಂ.ಪಿ.ಯಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಬಂಧಿಸಿದ ಬ್ರಹ್ಮಾವರ ಪೊಲೀಸರ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಶ್ಲಾಘಿಸಿದ್ದಾರೆ.