

ಉಡುಪಿ: ಉಡುಪಿ ಮತ್ತು ಮಂಗಳೂರು ಅವಳಿ ಜಿಲ್ಲೆಗಳಲ್ಲಿ ಸರಗಳ್ಳತನದ ಒಂಬತ್ತು ಪ್ರಕರಣಗಳನ್ನು ಬೇಧಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ 9.38 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.
ಮಂಗಳೂರು ಹೊಯ್ಗೆಬಜಾರ್ ಮುಳಿಹಿತ್ಲು ನಿವಾಸಿ ಚಂದ್ರಶೇಖರ (25) ಬಂಧಿತ. ಜ.3ರಂದು ಕುಕ್ಕಿಕಟ್ಟೆ ಜಂಕ್ಷನ್ ಬಳಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಂಕನಾಡಿ ಗೋರಿಗುಡ್ಡೆ ಎಂಬಲ್ಲಿ ಸೆಕೆಂಡ್ ಹ್ಯಾಂಡ್ ಬಜಾರ್‌ನಿಂದ ಟೆಸ್ಟ್ ರೈಡ್ ಮಾಡಲೆಂದು ಹೇಳಿ ಬೈಕ್ ತೆಗೆದುಕೊಂಡು ಬಂದಿದ್ದಾಗಿ ತಿಳಿಸಿದ್ದ. ಹೆಚ್ಚಿನ ವಿಚಾರಣೆ ಸಂದರ್ಭ ಇದೇ ಸ್ಕೂಟರ್‌ನಲ್ಲಿ ಉಡುಪಿಯ ಸೇಂಟ್ ಸಿಸಿಲಿ ಶಾಲೆ ಬಳಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಇಂದ್ರಾಳಿಯಲ್ಲಿ ಒಂಟಿ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ, ಮಂಗಳೂರಿನ ಬರ್ಕೆ, ಮಣಿಪಾಲ ಠಾಣೆ ಹಾಗೂ ಕಂಕನಾಡಿ ಠಾಣಾ ವ್ಯಾಪ್ತಿಯಿಂದ ತಲಾ ಒಂದೊಂದು ಬೈಕ್ ಕಳ್ಳತನ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಟಿ.ಆರ್.ಜೈಶಂಕರ್, ಕಾರ್ಕಳ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಭರತ್ ರೆಡ್ಡಿ, ನಗರ ವೃತ್ತದ ಸಿ.ಪಿ.ಐ ಮಂಜುನಾಥ, ಡಿಸಿಐಬಿ ಘಟಕ ಪಿ.ಐ ಮಂಜಪ್ಪ ಡಿ.ಆರ್, ಮಣಿಪಾಲ ಠಾಣಾ ಪಿ.ಐ ಮಂಜುನಾಥ, ಕಾಪು ಸಿಪಿಐ ಪ್ರಕಾಶ್, ನಗರ ಠಾಣಾ ಪಿಎಸ್‌ಐ ಸಕ್ತಿವೇಲು, ಅಪರಾಧ ವಿಭಾಗ ಪಿಎಸ್‌ಐ ವಾಸಪ್ಪ ನಾಯ್ಕ , ಮಣಿಪಾಲ ಪಿಎಸ್‌ಐ ರಾಜ್‌ಶೇಖರ್, ಮಲ್ಪೆ ಪಿಎಸ್‌ಐ ತಿಮ್ಮೇಶ್ ಬಿ.ಎನ್., ಕಾಪು ಪಿಎಸ್‌ಐ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.
ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿ: ಆರೋಪಿ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಎರಡು, ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಒಂದು, ಮಂಗಳೂರಿನ ಕದ್ರಿ, ಮೂಲ್ಕಿಯಲ್ಲಿ ತಲಾ ಒಂದೊಂದು ಸರಗಳ್ಳತನ ಮಾಡಿರುವ ಅಂಶ ಪತ್ತೆಯಾಗಿದೆ ಎಂದು ವಿಷ್ಣುವರ್ಧನ್ ಮಾಹಿತಿ ನೀಡಿದರು. ಈತನಿಂದ 172.02 ಗ್ರಾಂ ಚಿನ್ನ ಹಾಗೂ 40,000 ರೂ. ಮೌಲ್ಯದ ಬೈಕ್, 50 ಸಾವಿರ ರೂ. ಮೌಲ್ಯದ ಬೈಕ್, 40 ಸಾವಿರ ರೂ. ಮೌಲ್ಯದ ಸ್ಕೂಟರ್ ಸೇರಿ ಒಟ್ಟು 9,38,200 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈತ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಆರೋಪಿ. ಇನ್ನೂ ಹಲವು ಕಡೆ ಅಪರಾಧ ಕೃತ್ಯ ಎಸಗಿರುವ ಸಂಶಯವಿದ್ದು, ಈ ಬಗ್ಗೆ ನಗರ ಸಿ.ಪಿ.ಐ ಮಂಜುನಾಥ್ ತನಿಖೆ ನಡೆಸುತ್ತಿದ್ದಾರೆ ಎಂದರು.