

ಶಿವಮೊಗ್ಗ: ಭದ್ರಾವತಿಯಲ್ಲಿ ಯುವಕನ ಮೊಬೈಲ್ ಕಸಿದು ಪರಾರಿಯಾಗಿದ್ದ ಕಳ್ಳನನ್ನು ಬಂಧಿಸಿರುವ ಪೊಲೀಸರು 3.09 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 16 ಮೊಬೈಲ್ ಮತ್ತು ಒಂದು ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಬುಕ್ಕಂಬೂದಿ ಸಮೀಪದ ಬಿಲ್ಲೇಹಳ್ಳಿ ಗ್ರಾಮದ ಮುಜಾಮಿಲ್ ಅಲಿಯಾಸ್ ಮುಜ್ಜು (19) ಬಂಧಿತ. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಕಳೆದ ಜೂ.8ರಂದು ಭದ್ರಾವತಿಯ ಸಿ.ಎನ್.ರಸ್ತೆ ಡಬಲ್ ಟಾಕೀಸ್ ಎದುರು ದಾವಣಗೆರೆ ಜಿಲ್ಲೆ ಹೊನ್ನಾಳಿಯ ಕೆ.ಎನ್.ಕಿರಣ್ ಎಂಬುವರು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ 29 ಸಾವಿರ ರೂ. ಮೌಲ್ಯದ ಮೊಬೈಲ್ ಕಸಿದುಕೊಂಡು ಹೋದ ಬಗ್ಗೆ ಭದ್ರಾವತಿ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವದಲ್ಲಿ ಭದ್ರಾವತಿ ಡಿವೈಎಸ್‌ಪಿ(ಪ್ರಭಾರ) ಗಜಾನನ ವಾಮನ ಸುತಾರ್, ಭದ್ರಾವತಿ ವೃತ್ತ ನಿರೀಕ್ಷಕ ಶೈಲಕುಮಾರ್ ಮೇಲ್ವಿಚಾರಣೆಯಲ್ಲಿ ಪಿಎಸ್‌ಐ ಎಚ್.ಶರಣಪ್ಪ, ಸಿಬ್ಬಂದಿ ಹಾಲಪ್ಪ, ನಾರಾಯಣಸ್ವಾಮಿ, ಮೌನೇಶ್ ಶೀಕಲ್, ಎಸ್.ಚಿಕ್ಕಪ್ಪ, ಪ್ರವೀಣ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.