

ಮೈಸೂರು: ಚುನಾವಣೆ ಸಂದರ್ಭದಲ್ಲಿ ಮಾತ್ರ ನನ್ನನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಹಳ ಜನರು ಈಗ ಮಾತನಾಡುತ್ತಾರೆ. ಜೆಡಿಎಸ್ ಪಕ್ಷವನ್ನು ಕೆಳ ಹಂತದಿಂದ ಯಾವ ರೀತಿ ನಾನು ಕಟ್ಟಿದ್ದೇನೆ ಎಂಬುದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚಿನ ಸಮಸ್ಯೆಗಳು ಇರುವ ಹಿನ್ನೆಲೆಯಲ್ಲಿ ನಾನು ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಹೋಗುತ್ತಿಲ್ಲ, ಕ್ಷೇತ್ರದಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಬಿಜೆಪಿ ಪಕ್ಷದ ಸಂಘಟನೆ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ, ಜೆಡಿಎಸ್ ಪಕ್ಷದ ಸಂಘಟನೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿದೆ. ಲೋಕಸಭಾ ಚುನಾವಣೆಯನ್ನು ಎರಡು ಪಕ್ಷಗಳು ಒಟ್ಟಾಗಿ ಎದುರಿಸಿವೆ. ಮುಂದೆ ನಡೆಯುವ ಚುನಾವಣೆಗಳನ್ನು ಸಹ ಒಟ್ಟಾಗಿ ಎದುರಿಸಲಿದೆ ಎಂದರು.
ಕೆಆರ್‌ಎಸ್ ಜಲಾಶಯ ನಿರ್ಮಾಣ ವಿಚಾರದಲ್ಲಿ ಟಿಪ್ಪುವಿಗೆ ಸಂಬಂಧಿಸಿದ ಒಂದು ಶಿಲಾ ಶಾಸನ ಇದೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿಕೆ ನೀಡಿದ್ದಾರೆ. ಆದರೆ, ಅಡಿಗಲ್ಲು ಹಾಕಿದ್ದಾರೆ ಎಂದು ಅವರು ಹೇಳಿರುವುದನ್ನು ನಾನು ಕೇಳಿಲ್ಲ. ಅಡಿಗಲ್ಲು ಹಾಕಿ ಅಣೆಕಟ್ಟೆ ನಿರ್ಮಾಣ ಮಾಡಿದ್ದು ಮಹಾರಾಜರು ಹಾಗೂ ವಿಶ್ವೇಶ್ವರಯ್ಯ ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ ಎಂದು ಹೇಳಿದರು.
ಚುನಾವಣೆಯಲ್ಲಿ ಮತಕಳ್ಳನ ನಡೆದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗದವರು ನಾವು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾತ್ರ ಮತಗಳನ್ನು ಕದ್ದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ವೈಯಕ್ತಿಕವಾಗಿ ನಾನು ಪರಿಶೀಲನೆ ಮಾಡಿಲ್ಲ. ಸಾಮಾನ್ಯವಾಗಿ ನನ್ನ ಕ್ಷೇತ್ರದಲ್ಲೂ ಎಲ್ಲೆಲ್ಲಿ ಎಷ್ಟು ಮತಗಳು ಸಿಕ್ಕಿವೆ ಎಂದು ನೋಡಲ್ಲ. ಚುನಾವಣೆ ವ್ಯವಸ್ಥೆಯ ಮೇಲೆ ಎಲ್ಲರೂ ನಂಬಿಕೆ ಇಟ್ಟಿದ್ದು, ಸತ್ಯಾಸತ್ಯತೆ ಮುಂದಿನ ದಿನಗಳಲ್ಲಿ ಬಯಲಾಗಲಿದೆ ಎಂದು ಹೇಳಿದರು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಕುರಿತು ಪ್ರಕ್ರಿಯಿಸಿದ ಅವರು, ನ್ಯಾಯಾಂಗದ ತೀರ್ಪು ದೇವರ ತೀರ್ಪು ಎಂದು ಜನ ಈಗಲೂ ನಂಬಿದ್ದಾರೆ. ಮೇಲ್ಮಟ್ಟದ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದ್ದು, ನ್ಯಾಯಾಲಯದ ತೀರ್ಪನ್ನು ಪರಾಮರ್ಶೆ ಮಾಡುವಷ್ಟು ಶಕ್ತಿ ನನಗಿಲ್ಲ ಎಂದು ಹೇಳಿದರು.