ಆಣೆ ಮೂಲಕ ದೇವರಿಗೂ ಸಮಸ್ಯೆವೊಡ್ಡಿದ್ದಾರೆ

New Tenginakayi mahesh New
Published on

ಹುಬ್ಬಳ್ಳಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಮಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಲ್ಲವೆಂದು ಧರ್ಮಸ್ಥಳಕ್ಕೆ ಬಂದು ಆಣೆ ಮಾಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿರುವುದು ಸರಿಯಲ್ಲ. ರಾಜಕಾರಣಿಗಳು ಆಣೆ ಮಾಡುವ ಮೂಲಕ ದೇವರಿಗೂ ಸಮಸ್ಯೆ ತಂದೊಡ್ಡಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ವ್ಯಕ್ತಿಗೆ ತಾನು ಮಾತನಾಡಿರುವ ಬಗ್ಗೆ ಸ್ಪಷ್ಟತೆ ಇದ್ದರೆ ಸಾಕು. ಆಣೆ ಪ್ರಮಾಣದ ಅವಶ್ಯಕತೆ ಇಲ್ಲ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ಎಂಎಲ್​ಸಿ ಸಿ.ಟಿ. ರವಿ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಯಾರೂ ಬಳಸದ ಶಬ್ಧಗಳನ್ನು ಬಳಸಿರುವುದು ದುರ್ದೈವ. ಅಷ್ಟೇ ಅಲ್ಲ, ಸಿ.ಟಿ. ರವಿ ಮೇಲೆ ಹಲ್ಲೆ ಮಾಡಿರುವವರು ಯಾರ ಆಪ್ತ ಸಹಾಯಕರು ? ಸಚಿವೆ ಹೆಬ್ಬಾಳ್ಕರ ಆಡಳಿತ ಇದೆಯಾ ಅಥವಾ ಅವರ ಪಿಎಗಳ ಆಡಳಿತ ಇದೆಯಾ ? ಎಂದು ಪ್ರಶ್ನಿಸಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗಾಗಲಿ ಹಾಗೂ ಗೃಹ ಸಚಿವರಿಗಾಗಲಿ ಈ ಹಲ್ಲೆ ಬಗ್ಗೆ ಗೊತ್ತಿಲ್ಲವೇ ? ಯಾರ ಸೂಚನೆ ಮೇರೆಗೆ ಸಿ.ಟಿ. ರವಿ ಮೇಲೆ ಹಲ್ಲೆ ನಡೆಯಿತು ? ಹತ್ತು ನಿಮಿಷಗಳಿಗೊಮ್ಮೆ ಪೊಲೀಸರಿಗೆ ಫೋನ್ ಮಾಡಿ ಸೂಚನೆ ನೀಡುತ್ತಿದ್ದವರು ಯಾರು ? ಮೊದಲು ಈ ಎಲ್ಲ ಸಂಗತಿಗಳು ಬಯಲಿಗೆ ಬರಬೇಕು ಎಂದು ಒತ್ತಾಯಿಸಿದರು.

ಗೃಹ ಸಚಿವರಿಗೆ ಯಾವುದೇ ಮಾಹಿತಿ ನೀಡದೇ ಪೊಲೀಸರ ಮೂಲಕ ಸಿ.ಟಿ. ರವಿ ಅವರಿಗೆ ಕಿರುಕುಳ ಕೊಟ್ಟ ಮಹಾನ್ ನಾಯಕ ಯಾರೆಂಬು ಮೊದಲು ಗೊತ್ತಾಗಬೇಕು. ಈ ಕುರಿತು ಸಿಐಡಿ ನಿಷ್ಪಕ್ಷಪಾತ ತನಿಖೆ ನಡೆಸಲಿ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆದ ಸರ್ಕಾರದ ಕ್ರಮದ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net