ಜಿದ್ದಿಗೆ ಬಿದ್ದು ಕುರ್ಜು ಕಟ್ಟಿದ್ದರು!

1
ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಬರುತ್ತಿದ್ದಾಗ ಬಿದ್ದ ಕುರ್ಜು.
Published on

ತೇರು ಬಿದ್ದರೂ ಸ್ಪಂದಿಸದ ತಾಲೂಕು ಆಡಳಿತ - ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಆನೇಕಲ್ : ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಆಗಮಿಸುತ್ತಿದ್ದ ಎರಡು ತೇರುಗಳು (ಕುರ್ಜು) ನೆಲಕ್ಕುರುಳಿದ್ದರೂ ತಾಲೂಕು ಆಡಳಿತ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಶನಿವಾರ ಸಂಜೆ ರಾಯಸಂದ್ರ ಹಾಗೂ ದೊಡ್ಡನಾಗಮಂಗಲ ಕುರ್ಜುಗಳನ್ನು ಹುಸ್ಕೂರು ಮದ್ದೂರಮ್ಮ ದೇವಾಲಯಕ್ಕೆ ಎಳೆದು ತರುತ್ತಿರುವ ಸಂದರ್ಭದಲ್ಲಿ ಆಯಾ ತಪ್ಪಿ ಬಿದ್ದಿದ್ದವು, ರಾಯಸಂದ್ರ ಕುರ್ಜು ದೇವಾಲಯದ ಮುಂದೆಯೇ ಬಲಭಾಗಕ್ಕೆ ವಾಲಿ ಬಿದ್ದಿದೆ, ಜಾತ್ರೆ ನೋಡಲು ಬಂದಿದ್ದ ತಮಿಳುನಾಡಿನ ಹೊಸೂರಿನ ಲೋಹಿತ್ ಹಾಗೂ ಜಾತ್ರೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಬಾಲಕಿ ಜ್ಯೋತಿ ಸ್ಥಳದಲ್ಲಿ ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಜನ ತೇರಿನ ಅಕ್ಕಪಕ್ಕದಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ.

70ರಿಂದ 80 ಅಡಿ ಎತ್ತರದ ತೇರು ಕಟ್ಟುವ ಬದಲು 150 ರಿಂದ 180 ಅಡಿ ಎತ್ತರದ ತೇರನ್ನು ಕಟ್ಟಿ ಪ್ರತಿಷ್ಠೆಗೋಸ್ಕರ ಕೆಲವರು ಜಿದ್ದಿಗೆ ಬಿದ್ದು ಜಾತ್ರೆಗೆ ಕಳಂಕ ತರುತ್ತಿದ್ದಾರೆ. ಈ ರೀತಿ ಇನ್ನು ಮುಂದೆ ಆಗಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ವ್ಯಕ್ತ ಆಗುತ್ತಿವೆ.

ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಕಳೆದ ವರ್ಷ ಹೀಗಲಿಗೆ ತೇರು ಬರುವಾಗ ಬಿದ್ದು ಹೋಗಿತ್ತು, ಈ ವರ್ಷ 100 ಅಡಿ ಒಳಗೆ ತೇರನ್ನು ಕಟ್ಟಬೇಕು ಎಂದು ಹೆಬ್ಬಗೋಡಿ ಪೊಲೀಸರು ಸೂಚಿಸಿದ್ದರು, ಆದರೆ ಪ್ರತಿಷ್ಠೆಯ ಹಿಂದೆ ಬಿದ್ದು ಕೆಲವು ರಾಜಕಾರಣಿಗಳು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಬಳಿಕ ಎತ್ತರದ ತೇರನ್ನು ಕಟ್ಟಿದ್ದರು ಎನ್ನಲಾಗಿದೆ.

ಮದ್ದೂರಮ್ಮ ಜಾತ್ರೆಗೆ ಈ ಹಿಂದೆ ಹಲವು ಗ್ರಾಮಗಳಿಂದ ಆಗಮಿಸುತ್ತಿದ್ದ ತೇರುಗಳು ಇತ್ತೀಚೆಗೆ ರೈಲ್ವೆ ಹಳಿ ಅಭಿವೃದ್ಧಿ ಆಗುತ್ತಿರುವ ಹಿನ್ನೆಲೆ ರಸ್ತೆಯಲ್ಲಿ ಈಗ ಐದು ತೇರುಗಳು ಜಾತ್ರೆಗೆ ಬರುತ್ತಿದ್ದವು. ರಾಯಸಂದ್ರ, ದೊಡ್ಡ ನಾಗಮಂಗಲ ಘಟ್ಟಹಳ್ಳಿ , ಸಂಜೀವ ನಗರ ಹಾಗೂ ಲಕ್ಷ್ಮೀನಾರಾಯಣಪುರದಿಂದ ಐದು ತೇರುಗಳನ್ನು ಸಿದ್ಧಪಡಿಸಿ ಟ್ರ್ಯಾಕ್ಟರ್ ಹಾಗೂ ಎತ್ತುಗಳಲ್ಲಿ ಎಳೆದು ತರಲು ಮುಂದಾಗಿದ್ದಾರೆ. ಗಟ್ಟಹಳ್ಳಿ ಹಾಗೂ ಸಂಜೀವ ನಗರ ಗ್ರಾಮಗಳ ತೇರುಗಳು ದೇವಾಲಯದ ಬಳಿ ಬಂದಿದ್ದವು. ಆದರೆ ಲಕ್ಷ್ಮೀನಾರಾಯಣ ಪುರದ ತೇರು ಮಾರ್ಗ ಮಧ್ಯ ಮಳೆ ಪ್ರಾರಂಭ ಆದ ಹಿನ್ನೆಲೆಯಲ್ಲಿ ಹೂತು ಹೋಗಿದೆ. ದೊಡ್ಡನಾಗಮಂಗಲ ಮಾರ್ಗಮಧ್ಯೆ ಬಿದ್ದರೆ, ರಾಯಸಂದ್ರದಿಂದ ಬಂದ ತೆರಳು ದೇಗುಲದ ಬಳಿ ಆಯತಪ್ಪಿ ಬಿದ್ದಿದೆ, ಅದರಲ್ಲೂ ದೊಡ್ಡನಾಗಮಂಗಲ ತೇರು 150 ಅಡಿಗೂ ಮೀರಿ ಕಟ್ಟಿದ್ದರಿಂದ ಹತೋಟಿಗೆ ಸಿಗದೇ ರಸ್ತೆಯಲ್ಲಿ ಬಿದ್ದಿದೆ.

ಮನೇಲಿ ಒಬ್ಬಳೇ ಅಂತ ಕರೆದುಕೊಂಡು ಬಂದಿದ್ದೆ!

ಗೊಂಬೆಗಳ ಮಾರಾಟ ಮಾಡಲು ಕೆಂಗೇರಿಯಿಂದ ಮದ್ದೂರಮ್ಮ ಜಾತ್ರೆಗೆ ಬಂದಿದ್ದೆ. ಕೆಂಗೇರಿಯ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದ ಮಗಳಿಗೆ ಶನಿವಾರ, ಭಾನುವಾರ ಶಾಲೆ ರಜೆ ಇದ್ದ ಕಾರಣ ಮನೆಯಲ್ಲಿ ಮಗಳು ಒಬ್ಬಳೇ ಇರುತ್ತಾಳೆ ಎಂದು ಜಾತ್ರೆಗೆ ಕರೆದುಕೊಂಡು ಬಂದಿದ್ದೆ. ಜಾತ್ರೆಯಲ್ಲಿ ಅಂಗಡಿ ಹಾಕಿದ್ದಾಗ ಜೋರು ಮಳೆ ಬಂತು. ಗೊಂಬೆಗಳನ್ನು ತುಂಬಿಕೊಂಡು ನಾನು ಬೇರೆಡೆ ಇಟ್ಟು ಬರಲು ಹೋಗಿದ್ದೆ. ಆದರೆ ಮಗಳು ಜ್ಯೋತಿ, ಆಕೆಯ ಸ್ನೇಹಿತೆ ಪಾನಿಪುರಿ ಅಂಗಡಿ ಹತ್ತಿರ ನಿಂತಿದ್ದರು. ನಾನು ಬರುವುದರೊಳಗೆ ತೇರು ನನ್ನ ಮಗಳ ಮೇಲೆ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ನನ್ನ ಮಗಳು ಬದುಕುಳಿಯಲಿಲ್ಲ. ಇಲ್ಲಿಯವರೆಗೂ ಯಾರೂ ಬಂದು ಸಮಸ್ಯೆ ಏನೂ ಅಂತಾ ಕೇಳಿಲ್ಲ ಎಂದು ಮೃತ ಬಾಲಕಿ ಜ್ಯೋತಿಯ ತಾಯಿ ಗಂಗಮ್ಮ ತಾಲೂಕು ಆಡಳಿತ ಮತ್ತು ದೇವಾಲಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಆಕ್ರೋಶ ಹೊರಹಾಕಿದರು.

ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ

ತೇರಿನಡಿ ಸಿಲುಕಿ ಮೃತಪಟ್ಟ ಲೋಹಿತ್ ಇತ್ತೀಚೆಗಷ್ಟೇ ಸ್‌ಟಾ ವೇರ್

ಇಂಜಿನಿಯರಿಂಗ್ ಮುಗಿಸಿ ವೈಟ್‌ಫೀಲ್ಡ್ ಬಳಿಯ ಸಾಫ್ಟ್​ವೇರ್ ಕಂಪನಿಯಲ್ಲಿ ಟ್ರೈನಿಯಾಗಿ ಕೆಲಸ ಮಾಡುತ್ತಿದ್ದು, ಐದಾರು ತಿಂಗಳಲ್ಲಿ ಕೆಲಸ ಅಧಿಕೃತವಾಗುತ್ತಿತ್ತು. ಇನ್ಸ್ಟಾಗ್ರಾಮ್ನಲ್ಲಿ ಜಾತ್ರೆಯ ವಿಡಿಯೋ ನೋಡಿ ಸ್ನೇಹಿತರ ಜತೆ ಜಾತ್ರೆಗೆ ಬಂದಿದ್ದು, ಹತ್ತಿರದಿಂದ ತೇರು ನೋಡಲು ಹೋಗಿ ಸಾವಿಗೀಡಾಗಿದ್ದಾನೆ. ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಜಾತ್ರೆಗೆ ಬರುವ ಜನರ ಸುರಕ್ಷತೆಗೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಲೋಹಿತ್ ತಂದೆ ಷಣ್ಮುಖ ಕಣ್ಣೀರಿಟ್ಟರು.

ಪ್ರತಿಷ್ಠೆಗೆ ಬಿದ್ದವರೆಲ್ಲ ನಾಪತ್ತೆ

ಜಾತ್ರೆಯಲ್ಲಿ ತೇರು ಬಿದ್ದು ಸಾಕಷ್ಟು ಜನ ತೊಂದರೆಗೆ ಒಳಗಾಗಿದ್ದರೂ ಪ್ರತಿಷ್ಠೆಗಾಗಿ ತೆರು ಕಟ್ಟುತ್ತಿದ್ದ ಜನಪ್ರತಿನಿಧಿಗಳು ಯಾರ ಸಹಾಯಕ್ಕೂ ಬಾರದೆ ನಾಪತ್ತೆಯಾಗಿದ್ದಾರೆ.

ತಹಸೀಲ್ದಾರ್ ಬೇಜವಾಬ್ದಾರಿ

ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯ ಆಗಿರುವ ಹಿನ್ನೆಲೆ ಆನೇಕಲ್ ತಹಸೀಲ್ದಾರ್ ಶಶಿಧರ್ ಮಡ್ಯಾಳ್ ಅವರಿಗೆ ಮಾಧ್ಯಮದವರು ಕರೆ ಮಾಡಿ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯ ಆಗದೆ ಪರದಾಡುತ್ತಿದ್ದಾರೆ ಎಂದು ಹೇಳಿದಾಗ, ನಾನು ಕಾರ್ಯಕ್ರಮದಲ್ಲಿ ಇದ್ದೇನೆ. ಸೋಮವಾರ ಬಂದು ಪರಿಶೀಲನೆ ಮಾಡುತ್ತೇನೆ ಎನ್ನುವ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಸಚಿವರ ಸ್ಪಂದನೆ

ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಹಲವರಿಗೆ ಗಾಯ ಆಗಿದೆ ಎನ್ನುವ ಮಾಹಿತಿ ಗೊತ್ತಾಗಿದೆ. ಸ್ಥಳೀಯರು ಹಾಗೂ ತಾಲೂಕು ಆಡಳಿತಕ್ಕೆ ಸ್ಪಂದಿಸುವ ಸೂಚನೆ ನೀಡುತ್ತೇನೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.

ಹುಸ್ಕೂರು ಮದ್ದೂರಮ್ಮ ಜಾತ್ರೆ ನೂರಾರು ವರ್ಷಗಳ ಇತಿಹಾಸ ಇದ್ದು, ಇಂತಹ ಜಾತ್ರೆಗೆ ಕಳಂಕ ತರುವ ಕೆಲಸ ಆಗಬಾರದು, ಲಕ್ಷಾಂತರ ಭಕ್ತರ ನಂಬಿಕೆಯ ಆರಾಧ್ಯ ದೈವ ಮದ್ದೂರಮ್ಮ ಆಶೀರ್ವಾದದಿಂದ ದೊಡ್ಡ ಅನಾಹುತ ತಪ್ಪಿದೆ. -ರಾಮಕೃಷ್ಣ ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net