

ಬಾಗೇಪಲ್ಲಿ: ಎತ್ತಿನಹೊಳೆ ಪೈಪ್ಲೈನ್ ಕಾಮಗಾರಿ ಉದ್ದೇಶಕ್ಕಾಗಿ ಅಗೆದಿರುವ ಗ್ರಾಮದ ಮುಖ್ಯರಸ್ತೆಯನ್ನು ದುರಸ್ತಿಗೊಳಿಸಿ ಎಂದು ಮಿಟ್ಟೇಮರಿ ಗ್ರಾಮಸ್ಥರು ತಾಪಂ, ಗ್ರಾಪಂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿ ಕೇಂದ್ರ ಸ್ಥಾನದಲ್ಲಿರುವ ಬೂರಗಮಡಗು ಅಚೇಪಲ್ಲಿ ಮಾರ್ಗವನ್ನು ಎತ್ತಿನಹೊಳೆ ಕಾಮಗಾರಿ ಪೈಪ್ಲೈನ್ ಅಳವಡಿಸುವ ಟೆಂಡರ್ ಪಡೆದಿರುವ ಗುತ್ತಿಗೆದಾರ ಪೈಪ್ಲೈನ್ ಅಳವಡಿಸುವ ಉದ್ದೇಶಕ್ಕಾಗಿ ಅಗೆದಿದ್ದು, ಕೆಲಸ ಪೂರ್ಣವಾದ ಬಳಿಕ ರಸ್ತೆಗೆ ಮರು ಡಾಂಬರು ಹಾಕದೆ, ಗುಂಡಿ ಸರಿಪಡಿಸದೆ ಹಾಗೆ ಬಿಟ್ಟಿದ್ದಾರೆ. ರಸ್ತೆ ಅಗೆದು 6 ತಿಂಗಳಾದರೂ ಡಾಂಬರು ಹಾಕಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೂ ಮುಂದಾಗಿಲ್ಲ. ಗ್ರಾಮಸ್ಥರು ಸರಿಪಡಿಸುವಂತೆ ಹಲವು ಬಾರಿ ಗುತ್ತಿಗೆದಾರನಿಗೆ, ಎತ್ತಿನಹೊಳೆ ಯೋಜನೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಈಗ ಮಳೆಯಾಗುವುತ್ತಿರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ.
ಸುಮಾರು 6 ತಿಂಗಳ ಹಿಂದೆ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ಪೈಪ್ಲೈನ್ ಕಾಮಗಾರಿಗೆ ಗುತ್ತಿಗೆದಾರರು ಗ್ರಾಪಂನಿಂದ ಅನುಮತಿ ಪಡೆದಿಲ್ಲ, ಜೆಸಿಬಿಯಿಂದ ಹಾನಿಯಾದ ಮಾರ್ಗ ಸರಿಪಡಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿದ್ದರೂ ಇಂದು ನಾಳೆ ಎಂಬ ಸಬೂಬು ಹೇಳಿಕೊಂಡು ಕಾಲಹರಣ ಮಾಡುತ್ತಿರುವುದರಿಂದ ಗುತ್ತಿಗೆದಾರನಿಗೆ ಗ್ರಾಪಂನಿಂದ ನೋಟಿಸ್ ನೀಡಿ ಎಚ್ಚರಿಕೆ ನೀಡುತ್ತೇವೆ. ರಸ್ತೆ ಸರಿಪಡಿಸದಿದ್ದರೆ ಕ್ರಮ ಜರುಗಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇನೆ.
| ವೆಂಕಟೇಶಪ್ಪ, ಪಿಡಿಒ ಮಿಟ್ಟೇಮರಿ ಗ್ರಾಪಂ
ಗ್ರಾಮಸ್ಥರು ಗುತ್ತಿಗೆದಾರನಿಗೆ ಹಲವು ಬಾರಿ ಮನವಿ ಮಾಡಿದರೂ ಸರಿಪಡಿಸಿಕೊಡುವ ಭರವಸೆ ನೀಡಿ ನಾಪತ್ತೆ ಆಗಿದ್ದಾರೆ. ಅದರ ಪರಿಣಾಮ ರಸ್ತೆ ಸಂಪೂರ್ಣ ಗುಂಡಿಗಳ ಮಯವಾಗಿ ಮಳೆ ಬಿದ್ದರೆ ಕೆಸರುಗದ್ದೆಯಂತಾಗಿ ಜನರಿಗೆ ತೊಂದರೆಯಾಗುತ್ತಿದೆ. ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಕಾಮಗಾರಿಗೆ ಮುಂದಾಗಬೇಕಾಗಿದೆ.
| ಮಂಜುನಾಥ, ಮಿಟ್ಟೇಮರಿ ಗ್ರಾಮ
ಮಿಟ್ಟೇಮರಿ ಗ್ರಾಪಂನಿಂದ ಅನುಮತಿ ಪಡೆಯದೆ ರಸ್ತೆ ಅಗೆದಿರುವುದು ಕಾನೂನು ಬಾಹಿರವಾಗಿದ್ದು, ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು. ವಾಹನ ಸವಾರರು ನಿತ್ಯನರಕ ಅನುಭವಿಸುವಂತಾಗಿದ್ದು, ಮಳೆಗಾಲದಲ್ಲಿ ಕೆಸರು ಗದ್ದೆಯಂತಾದರೆ, ಬೇಸಿಗೆಯಲ್ಲಿ ಧೂಳುಮಯ ರಸ್ತೆಗಳಾಗಿವೆ, ಇದರಿಂದ ರಸ್ತೆ ಬದಿಯಲ್ಲಿರುವ ನಾಗರಿಕರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.
| ಎಂ.ಟಿ.ಮಧುರೇಶ್, ಮಿಟ್ಟೇಮರಿ ಗ್ರಾಮ