

ಚಿಕ್ಕಬಳ್ಳಾಪುರ: ದಲಿತರನ್ನು ಮನೆಯ ಒಳಗೆ ಕರೆಸಿಕೊಳ್ಳದ ಹಿಂದು ಧರ್ಮವು ಯಾವ ಧರ್ಮ? ಎಂದು ಶಾಸಕ ಪ್ರದಿಪ್ ಈಶ್ವರ್ ಅಯ್ಯರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದು ಧರ್ಮ, ಹಿಂದು ಧರ್ಮ ಎಂಬುದಾಗಿ ನಿರಂತರವಾಗಿ ಬಾಯಿ ಬಡಿದುಕೊಳ್ಳಲಾಗುತ್ತದೆ. ಆದರೆ, ಶೋಷಿತ ವರ್ಗದವರನ್ನು ಮನೆಯೊಳಗೆ ಕರೆಸಿಕೊಳ್ಳುವುದಿಲ್ಲ. ಅಸ್ಪ--ೃಶ್ಯತೆಯ ಭಾವನೆಯಲ್ಲಿ ದೂರದಿಂದಲೇ ವ್ಯವಹರಿಸಲಾಗುತ್ತದೆ. ಇಂತಹುದನ್ನು ಯಾವ ಧರ್ಮ ಎಂದು ಪ್ರಶ್ನಿಸಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸಹ ಅಸ್ಪೃಶ್ಯತೆಯ ಕಿರುಕುಳವನ್ನು ಅನುಭವಿಸಿದರು. ಶಾಲೆಯಲ್ಲಿ ಇತರ ವಿದ್ಯಾರ್ಥಿಗಳನ್ನು ಬಿಟ್ಟು ಬೇರೆ ಕಡೆ ಕೂರಬೇಕು. ನೀರನ್ನು ಮುಟ್ಟುವಂತಿರಲಿಲ್ಲ, ಗುಮಾಸ್ತ ಮೇಲಿಂದ ಹಾಕಿದಾಗ ಕೈಯಲ್ಲಿ ಹಿಡಿದು ಕುಡಿಯಬೇಕು. ಹಾಕುವವರು ಯಾರೂ ಇಲ್ಲದಿದ್ದಲ್ಲಿ ನೀರು ಕುಡಿಯುವಂತಿರಲಿಲ್ಲ. ಪ್ರತ್ಯೇಕ ಕೆರೆ ಬಾವಿ ನೀರಿನ ವ್ಯವಸ್ಥೆ, ದಲಿತರನ್ನು ಮುಟ್ಟುವುದೇ ದೊಡ್ಡ ಶಾಪ ಎನ್ನುವಂತಹ ನೋವಿನ ವಾತಾವರಣ ಇತ್ತು. ಓದುವ ಸಮಯದಲ್ಲಿ ಹೋಟೆಲ್ ನಲ್ಲಿ ತಂಗಲು, ಗಾಡಿಯಲ್ಲಿ ಓಡಾಡಲು ಅವಕಾಶ ನೀಡದೇ ಅವಮಾನ ಮಾಡಿದ್ದನ್ನು ಸ್ವತಃ ಅಂಬೇಡ್ಕರ್ ಬರಹದಲ್ಲಿ ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೇ ಉನ್ನತ ವಿದ್ಯಾಭ್ಯಾಸದ ಪಾಂಡಿತ್ಯವನ್ನು ಪಡೆದರು. ಅವರು ರಚಿಸಿದಂತಹ ಸಂವಿಧಾನವನ್ನು ಎಲ್ಲ ವರ್ಗದವರೂ ಓದುವಂತೆ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
*ಕಾಲನಿಯಲ್ಲಿ ಅಭಿವೃದ್ಧಿ ಕೆಲಸ
ತಾಲೂಕಿನ ಗುಂಡ್ಲು ಮಂಡಿಕಲ್ಲುವಿನಲ್ಲಿ ಕಾಲನಿಯಲ್ಲಿ 38 ಶೌಚಗೃಹ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರದಿಪ್ ಈಶ್ವರ್ ಚಾಲನೆ ನೀಡಿದರು.
ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದಲಿತ ಕಾಲನಿಯಲ್ಲಿ ಬಯಲು ಬಹಿರ್ದೆಸೆ ಸಮಸ್ಯೆಯ ಬಗ್ಗೆ ಸ್ಥಳಿಯರು ಅಳಲು ತೋಡಿಕೊಂಡಿದ್ದರು. ಇದರಿಂದ ಶಾಸಕರು 40 ಲಕ್ಷ ರೂ ಅನುದಾನವನ್ನು ಮಂಜೂರು ಮಾಡಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಇದೇ ವೇಳೆ ದಲಿತ ಮಹಿಳೆಯರು ಶಾಸಕರಿಗೆ ಸಿಹಿಯನ್ನು ತಿನಿಸಿದರು. ಹಾಗೆಯೇ ಅಹವಾಲುಗಳನ್ನು ಹೇಳಿಕೊಂಡರು