ನೌಕರಿ ಅರಸಿ ಬಂದು ಸ್ಲೀಪರ್​ಸೆಲ್: ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆತಂಕ

BHASKARA RAO
Published on

ಬೆಂಗಳೂರು: ರಾಜಧಾನಿಗೆ ಉದ್ಯೋಗ ಅರಸಿ ಬರುವ ಕೆಲವರು ಉಗ್ರ ಸಂಘಟನೆಗಳ ಜತೆ ಸೇರಿ ಸ್ಲೀಪರ್ ಸೆಲ್ ಆಗುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎಸ್. ಭಾಸ್ಕರ್ ರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ಎಫ್​ಕೆಸಿಸಿಐ ಬುಧವಾರ ಏರ್ಪಡಿಸಿದ್ದ ‘ಪೊಲೀಸ್ ಆಯುಕ್ತರ ಜತೆ ಉದ್ಯಮಿಗಳ’ ಸಂವಾದದಲ್ಲಿ ಮಾತನಾಡಿದರು.

ಹಸಿದು ಬಂದ ಯಾರೊಬ್ಬರೂ ಬೆಂಗಳೂರಿನಿಂದ ಮರಳಿ ಹೋಗಿಲ್ಲ. ನಗರ ಎಲ್ಲರಿಗೂ ಕೆಲಸ ಕೊಟ್ಟು ಬದುಕಲು ದಾರಿ ಮಾಡಿಕೊಟ್ಟಿದೆ. ಅದಕ್ಕಾಗಿ ರಾಜ್ಯ, ಹೊರರಾಜ್ಯಗಳು ಮಾತ್ರವಲ್ಲದೆ ವಿದೇಶಗಳಿಂದ ಜನ ಬಂದು ಆಶ್ರಯ ಪಡೆದಿದ್ದಾರೆ. ಈ ಪೈಕಿ ಕೆಲವರು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿ ಆಗಿರುವುದು ಬೇಸರದ ಸಂಗತಿ ಎಂದರು. ಬಾಂಗ್ಲಾದೇಶದಲ್ಲಿ ಜಾಗತಿಕ ಮಟ್ಟದ 10 ಉಗ್ರ ಸಂಘಟನೆಗಳು ಸಕ್ರಿಯವಾಗಿವೆ. ಬಾಂಗ್ಲಾದಿಂದ ಕೆಲಸಕ್ಕಾಗಿ ನಗರಕ್ಕೆ ಬಂದವರು ಸ್ಲಿಪರ್ ಸೆಲ್​ಗಳಾಗಿದ್ದಾರೆ. ಅಂಥವರ ಪತ್ತೆ ಕಾರ್ಯ ಕಷ್ಟವಾಗಿದೆ ಎಂದು ಹೇಳಿದರು.

1980ರಲ್ಲಿ ಮುಂಬೈ ನಗರ ಉದ್ಯೋಗದ ಪರ್ವಕಾಲ ವಾಗಿತ್ತು.. ಇದೀಗ ಬೆಂಗಳೂರಿನಲ್ಲಿ ಕೆಲಸ ಹೆಚ್ಚಾಗಿ ಸಿಗುತ್ತವೆ. ಇಲ್ಲಿ ಪ್ರಾದೇಶಿಕ ತಾರತಮ್ಯ ಇಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದರು. ಬೆಂಗಳೂರಿನ ರಕ್ಷಣೆಗೆ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಮ್ಮ-100ಗೆ ಕರೆ ಮಾಡಿದ 7 ರಿಂದ 10 ನಿಮಿಷದಲ್ಲಿ ಪೊಲೀಸರು ರಕ್ಷಣೆಗೆ ಧಾವಿಸುತ್ತಾರೆ. ಸದ್ಯ ನಗರದಲ್ಲಿ 270 ಹೊಯ್ಸಳ ಗಸ್ತು ತಿರುಗುತ್ತಿವೆ. ರಾತ್ರಿ ಇಬ್ಬರು ಡಿಸಿಪಿ, 12 ಎಸಿಪಿ, 25 ಪಿಐ ಸೇರಿ 1,900 ಪೊಲೀಸರು ಪಹರೆ ನಡೆಸುತ್ತಾರೆ. 149 ಸಂಚಾರ ಪೊಲೀಸರು

ರಾತ್ರಿ ವೇಳೆ ಕಾರ್ಯನಿರ್ವಹಿಸುತ್ತಾರೆ. ಇದಕ್ಕೆ ಹೆಚ್ಚುವರಿ ಆಗಿ 500ರಿಂದ 600 ಹೊಸ ಹೊಯ್ಸಳ ವಾಹನ ಖರೀದಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. ಆರ್ಥಿಕ ಮತ್ತು ಸೈಬರ್ ಅಪರಾಧಗಳು ಹಾಗೂ ಉಗ್ರ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಎಫ್​ಕೆಸಿಸಿಐ ಅಧ್ಯಕ್ಷ ಕೆ. ಜನಾರ್ದನ್ ಮನವಿ ಮಾಡಿದರು.

ಡಿಡಿ ಕೇಸ್​ನಿಂದ ವ್ಯಾಪಾರಕ್ಕೆ ಅಡ್ಡಿ: ಪೊಲೀಸರು ಪಾನಮತ್ತರ ತಪಾಸಣೆ ಮಾಡುವುದರಿಂದ ಮದ್ಯ ಮಾರಾಟಕ್ಕೆ ಅಡ್ಡಿ ಉಂಟಾಗಿದೆ. ಬೆಳಗ್ಗೆ ಮದ್ಯ ಮಾರಾಟ ಕಡಿಮೆ. ಸಂಜೆ ಮಾತ್ರ ವಹಿವಾಟು ನಡೆಯುತ್ತದೆ. ಸಂಜೆ 7 ಗಂಟೆಗೆ ಪೊಲೀಸರು ತಪಾಸಣೆಗೆ ಆರಂಭಿಸುತ್ತಾರೆ. ಇದರಿಂದ ವಿನಾಯಿತಿ ನೀಡುವಂತೆ ಮದ್ಯ ಮಾರಾಟಗಾರರ ಸಂಘದ ಪ್ರತಿನಿಧಿಗಳು ಆಯುಕ್ತರಿಗೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಭಾಸ್ಕರ್ ರಾವ್, ಸಂತೋಷ, ದುಃಖ ಮಾತ್ರವಲ್ಲದೆ ಏಕಾಂಗಿಯಾಗಿದ್ದಾಗಲೂ ನೀವೇ (ಮದ್ಯ) ಬೇಕು ಎಂದು ಹಾಸ್ಯ ಮಾಡಿದರು.

ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರ ಕುರಿತು ಪೊಲೀಸರು ಸಮೀಕ್ಷೆ ನಡೆಸಿಲ್ಲ. ಕೆಲವು ತನಿಖೆ ಆಧರಿಸಿ ಮಾಹಿತಿ ನೀಡಲಾಗಿದೆ. | ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net