

ಭಟ್ಕಳ: ಮಾಡದ ಕೆಲಸವನ್ನು ತಾನೇ ಮಾಡಿದ್ದೇನೆ ಎಂದು ಸುಳ್ಳು ಹೇಳಿ ಜನರನ್ನು ನಂಬಿಸುವಲ್ಲಿ ಮಾಜಿ ಶಾಸಕ ನಿಸ್ಸೀಮರು ಎಂದು ಸಚಿವ ಮಂಕಾಳ ವೈದ್ಯ ಲೇವಡಿ ಮಾಡಿದರು.
ತಾಲೂಕಿನ ಜಾಲಿಯಲ್ಲಿ ಸೋಮವಾರ ನೂತನ ಐಟಿಐ ಕಾಲೇಜು ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. 2007ರಲ್ಲಿ ಭಟ್ಕಳಕ್ಕೆ ಐಟಿಐ ಕಾಲೇಜು ಬಂದಿದ್ದು, ಇಲ್ಲಿಯವರೆಗೆ ಅದು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಎಲ್ಲ ಶಿಕ್ಷಣ ಸಂಸ್ಥೆಗಳು ಒಂದೆಡೆ ಕಾರ್ಯನಿರ್ವಹಿಸಬೇಕು ಎಂದು ಹೆಬಳೆಯಲ್ಲಿ 5ಎಕರೆಯ ವಿಶಾಲ ಸ್ಥಳದಲ್ಲಿ ಐಟಿಐ ಕಾಲೇಜು ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿಸಿದ್ದೆ. ಪಹಣಿ ಪತ್ರವೂ ಇನ್ನೂ ಐಟಿಐ ಕಾಲೇಜಿನ ಹೆಸರಿನಲ್ಲಿದೆ. 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಒಂದೆ ವೇದಿಕೆಯಲ್ಲಿ 70ಕ್ಕೂ ಅಧಿಕ ಕಾಮಾಗಾರಿಗಳನ್ನು ಉದ್ಘಾಟನೆ ಮಾಡಿಸಲಾಗಿತ್ತು. ಅದರಲ್ಲಿ ಐಟಿಐ ಕಾಲೇಜು ಸೇರಿತ್ತು. ಬಳಿಕ ಶಾಸಕರಾದ ಸುನೀಲ ನಾಯ್ಕ ಜಾಲಿಯಲ್ಲಿ ವರ್ಗಾಯಿಸಿದ್ದೆ ಒಂದು ಸಾಧನೆ ಎಂದು ರಾಜಕೀಯ ಮಾಡುತ್ತಿರುವುದು ಹಾಸ್ಯಾಸ್ಪದ. ನಾವು ಮಾಡಿದ ಕೆಲಸ ಮಾತನಾಡಬೇಕು ಹೊರತು ನಾವಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಅವರಿಗೆ ಟಾಂಗ್ ನೀಡಿದರು.
ಫಲಕ ಅನಾವರಣ
ಯುವನಿಧಿ ಯೋಜನೆಯ ಕರಪತ್ರವನ್ನು ಸಚಿವರು ಬಿಡುಗಡೆ ಮಾಡಿದರು. ಪದವಿ ವಿದ್ಯಾರ್ಥಿಗಳಿಗೆ 3 ಸಾವಿರ ರೂ., ಐಟಿಐ ವಿದ್ಯಾರ್ಥಿಗಳಿಗೆ 1.5ಸಾವಿರ ರೂ.ಗಳನ್ನು ಸರ್ಕಾರ ನೀಡುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು. ಬಳಿಕ ಕಾರವಾರದ ಕಾಜುಭಾಗದ ರಂಗಮಂದಿರಲ್ಲಿ ಜ.9ರಂದು ನಡೆಯುವ ಉದ್ಯೋಗ ಮೇಳದ ಕರಪತ್ರ ಬಿಡುಗಡೆಗೊಳಿಸಿದರು.
ಬೆಳಗಾವಿಯ ಜಂಟಿ ನಿರ್ದೇಶಕ ಡಾ. ಬಸವ ಪ್ರಭು ಹೀರೆಮಠ, ಪಂಚಾಯತ್‌ರಾಜ್ ಇಲಾಖೆಯ ಇಂಜಿನೀಯರ್ ರಾಮು ಪಿ. ಗುನಗಿ, ಸಹಾಯಕ ಇಂಜಿನೀಯರ್ ಮಲ್ಲಪ್ಪ ಮಡಿವಾಳ, ಕಾಲೇಜು ಪ್ರಾಂಶುಪಾಲ ಗಂಗಾಧರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ವಿ ನಾಯಕ, ಗ್ಯಾರಂಟಿ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ, ತಾಲೂಕಾಧ್ಯಕ್ಷ ರಾಜು ನಾಯ್ಕ, ಪಪಂ ಸದಸ್ಯರಾದ ದಯಾನಂದ ನಾಯ್ಕ, ರಮೇಶ ಗೊಂಡ, ರಮೇಶ ನಾಯ್ಕ, ನಾಗರಾಜ ನಾಯ್ಕ, ಈಶ್ವರ ಮೊಗೇರ ಇತರರು ಇದ್ದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.