Web Exclusive | ಶಾಖೋತ್ಪನ್ನ ಕೇಂದ್ರ ಪುನರಾರಂಭ; ಸೌರ-ಜಲಮೂಲ ಉತ್ಪಾದನೆ ಇಳಿಕೆ

Web Ex
Published on

| ಶಿವಮೂರ್ತಿ ಹಿರೇಮಠ ರಾಯಚೂರು

ಲಾಕ್​ಡೌನ್ ನಂತರ ರಾಜ್ಯದ ವಿದ್ಯುತ್ ಬೇಡಿಕೆಯಲ್ಲಿ ಇಳಿಕೆ ಆಗಿದ್ದರಿಂದ ವಿಶ್ರಾಂತಿಯಲ್ಲಿದ್ದ ಶಾಖೋತ್ಪನ್ನ ಕೇಂದ್ರಗಳ ಘಟಕಗಳು ಈಗ ಕಾರ್ಯಾರಂಭ ಮಾಡಿವೆ. ವಿದ್ಯುತ್ ಬೇಡಿಕೆಯಲ್ಲಿ ಏರಿಕೆ ಹಾಗೂ ಸೌರ, ಜಲ ಮೂಲ ವಿದ್ಯುತ್ ಉತ್ಪಾದನೆಯಲ್ಲಿ ಇಳಿಕೆ ಕಂಡಿದ್ದೇ ಇದಕ್ಕೆ ಕಾರಣ.

ಕಳೆದ ಐದಾರು ತಿಂಗಳಲ್ಲಿ ವಿದ್ಯುತ್ ಬೇಡಿಕೆ ಆರರಿಂದ ಏಳು ಸಾವಿರ ಮೆಗಾವಾಟ್ ಆಸುಪಾಸಿನಲ್ಲಿತ್ತು. ಸೌರ, ಪವನ ಮತ್ತು ಜಲಮೂಲ ಉತ್ಪಾದನೆಯಲ್ಲಿಯೇ ಬೇಡಿಕೆ ಸರಿಮಾಡಲಾಗಿತ್ತು. ಈ ಕಾರಣಕ್ಕೆ ಘಟಕಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಈಗ ವಿದ್ಯುತ್ ಬೇಡಿಕೆ ಗರಿಷ್ಠ 10 ಸಾವಿರ ಮೆವಾ ದಾಟಿದೆ. ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಸೌರ ಹಾಗೂ ಜಲ ಮೂಲದ ವಿದ್ಯುತ್ ಉತ್ಪಾದನೆಯಲ್ಲೂ ಕಡಿತ ಆಗಿದ್ದರಿಂದ ಬಿಟಿಪಿಎಸ್​ನ ಎರಡು ಘಟಕ ಮತ್ತು ಆರ್​ಟಿಪಿಎಸ್​ನ ಐದು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ. ಪ್ರಸ್ತುತ ಬಿಟಿಪಿಎಸ್ ಎರಡು ಘಟಕಗಳಿಂದ 599 ಮೆವಾ ಮತ್ತು ಆರ್​ಟಿಪಿಎಸ್​ನ ಐದು ಘಟಕಗಳಿಂದ 778 ಮೆವಾ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಈಗಾಗಲೇ ಆರಂಭವಾಗಿದ್ದ ವೈಟಿಪಿಎಸ್​ನ ಎರಡು ಘಟಕಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡು, ಶನಿವಾರ ಸ್ಥಗಿತ ಮಾಡಲಾಗಿದೆ.

ಸೌರ, ಪವನ ಮೂಲದಿಂದ ಹಿಂದೆ 4,900 ಮೆವಾವರೆಗೆ ವಿದ್ಯುತ್ ಲಭ್ಯವಾಗುತ್ತಿತ್ತು. ಈಗ ನಾಲ್ಕು ಸಾವಿರ ಮೆವಾ ಮಾತ್ರ ಲಭ್ಯವಾಗುತ್ತಿದೆ. ಜಲಮೂಲದಿಂದ ಸರಾಸರಿ 700 ಮೆವಾವರೆಗೆ ವಿದ್ಯುತ್ ದೊರೆಯುತ್ತಿದೆ. ಜತೆಗೆ ಕೇಂದ್ರ ಜಾಲದಿಂದ 2,575 ಮೆವಾವರೆಗೆ ವಿದ್ಯುತ್ ಲಭ್ಯವಾಗುತ್ತಿದೆ. ಬಿಟಿಪಿಎಸ್, ಆರ್​ಟಿಪಿಎಸ್ ಜತೆಗೆ ಪ್ರಸಕ್ತ ವರ್ಷದಲ್ಲಿ ವೈಟಿಪಿಎಸ್​ನಿಂದಲೂ ವಿದ್ಯುತ್ ಸಿಗುತ್ತಿದ್ದು, ಬೇಸಿಗೆಯಲ್ಲಿ ವಿದ್ಯುತ್ ಅಭಾವ ಎದುರಾಗುವ ಸಾಧ್ಯತೆಗಳು ಕಡಿಮೆ ಎಂದು ಕೆಪಿಸಿ ಅಧಿಕಾರಿಗಳು ತಿಳಿಸುತ್ತಿದ್ದಾರೆ.

ಬೇಸಿಗೆಯಲ್ಲಿ ಬೇಡಿಕೆ ಹೆಚ್ಚುವ ಸಾಧ್ಯತೆ

ಈ ಹಿಂದೆ ಬೇಸಿಗೆ ಸಂದರ್ಭ ರಾಜ್ಯದ ವಿದ್ಯುತ್ ಬೇಡಿಕೆ 12 ಸಾವಿರ ಮೆವಾ ದಾಟಿದ್ದರಿಂದ ಬೇಡಿಕೆ ಸರಿದೂಗಿಸಲು ಕೆಪಿಸಿ ಹೆಣಗಾಡಿತ್ತು. ಶಾಖೋತ್ಪನ್ನ ಕೇಂದ್ರಗಳಿಗೆ ನೀರಿನ ಅಭಾವ ಎದುರಾಗಿ, ಪೂರ್ಣ ಪ್ರಮಾಣ ಉತ್ಪಾದನೆ ಸಾಧ್ಯವಾಗದ ಕಾರಣ ಜನರು ವಿದ್ಯುತ್ ಸಮಸ್ಯೆ ಎದುರಿಸಿದ್ದರು. ಪ್ರಸಕ್ತ ಬೇಸಿಗೆಯಲ್ಲೂ ವಿದ್ಯುತ್ ಬೇಡಿಕೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆರ್​ಟಿಪಿಎಸ್ ಮತ್ತು ವೈಟಿಪಿಎಸ್​ಗೆ ನೀರೊದಗಿಸಲು ಗುರ್ಜಾಪುರ ಜಲಾಶಯದಲ್ಲಿ ನೀರು ನಿಲ್ಲಿಸಿದ್ದರಿಂದ ಈ ಬಾರಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳು ಕಡಿಮೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net