ಗ್ರಾಪಂನಲ್ಲಿ ಹಣವಿಲ್ಲ, ಹೂಳೆತ್ತಿಸಿಕೊಡಿ!

11-kollegal1
ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಬಿ.ತೋಟೇಶ್, ಚೇತನ್, ದೊರೈರಾಜ್, ಎ.ಪಿ.ಶಂಕರ್, ಅನ್ಸರ್ ಬೇಗ್ ಮತ್ತಿತರಿದ್ದರು.
Published on

ಕೊಳ್ಳೇಗಾಲ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಕುಂತೂರು ಗ್ರಾಮ ಪಂಚಾಯಿತಿ ಸದಸ್ಯೆ ರೂಪಾ ಮಾತನಾಡಿ, ಕುಂತೂರು ಗ್ರಾಮದಲ್ಲಿ ನೀರಾವರಿ ಇಲಾಖೆಗೆ ಸೇರಿದ ಕನ್ನಿಪುರ ಕಾಲುವೆ ಹೂಳಿನಿಂದ ಭರ್ತಿಯಾಗಿದೆ. ಇದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಗ್ರಾ.ಪಂ.ನಲ್ಲೂ ಹೂಳು ತೆಗೆಸಲು ಅನುದಾನವಿಲ್ಲ. ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯಿಂದಲೇ ಹೂಳೆತ್ತಿಸುವ ಕೆಲಸ ಮಾಡಿಸಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಕ್ರಮ ವಹಿಸುವುದಾಗಿ ಶಾಸಕ.ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.
ಅಲ್ಕೆರೆ ಅಗ್ರಹಾರದ ರೇವಣ್ಣ ಮಾತನಾಡಿ, ಅಲ್ಕೆರೆ ಅಗ್ರಹಾರದ ಮುಖ್ಯ ಕಾಲುವೆಯಲ್ಲಿ ಹೂಳು ತುಂಬಿಕೊಂಡು ತೊಂದರೆಯಾಗಿದೆ ಎಂದರು. ಈ ಬಗ್ಗೆ ನೀರಾವರಿ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ತಿಳಿಸುವುದಾಗಿ ಶಾಸಕರು ತಿಳಿಸಿದರು.
ಹೊಸ ಮಾಲಂಗಿ ಗ್ರಾಮದ ಅಶೋಕ್ ಮಾತನಾಡಿ, ಟಗರಪುರ ಪಂಚಾಯಿತಿ ವ್ಯಾಪ್ತಿಯ ಹೊಸ ಮಾಲಂಗಿ ಗ್ರಾಮದಲ್ಲಿ ಸರ್ವೇ ನಂ.4471 ರಲ್ಲಿ ನನಗೆ 99 ಸೆಂಟ್ ಜಮೀನಿದ್ದು, ಸರ್ಕಾರದ ವತಿಯಿಂದ ಟಿಲ್ಲರ್ ಕೊಡಿಸಕೊಡಬೇಕೆಂದು ಮನವಿ ಮಾಡಿದರು. ಈ ವೇಳೆ ವರ್ಗಾವಣೆ, ಉದ್ಯೋಗವಕಾಶ ಸೇರಿದಂತೆ ಇನ್ನಿತರ ಒಟ್ಟು 11 ಅಹವಾಲುಗಳನ್ನು ಶಾಸಕ ಎ.ಆರ್.ಕೃಷ್ಣ ಮೂರ್ತಿ ಸ್ವೀಕರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೈರಾಜ್, ನಗರಸಭೆ ಸದಸ್ಯರಾದ ಎ.ಪಿ.ಶಂಕರ್, ಶಾಂತರಾಜು, ಮಂಜುನಾಥ್, ಮುಖಂಡ ಅನ್ಸರ್ ಬೇಗ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net