ಯುದ್ಧ ನಡೆಯುವ ಸುಳಿವೂ ಇರಲಿಲ್ಲ : ಆರ್ಟಿಲರಿ ವಿಭಾಗದಲ್ಲಿ ಸರ್ವೇಯರ್ ಆಗಿದ್ದ ಲೀಲಾಧರ್ ಕಡಂಬೋಡಿ ನೆನಪು

leeladhar
ಲೀಲಾಧರ್
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಶ್ರೀನಗರ ಬಾದಾಮಿ ಕ್ಯಾಂಟ್ ಏರಿಯಾದ ರೆಜಿಮೆಂಟ್‌ನಲ್ಲಿ ಇರುವ ಸಂದರ್ಭ 1999 ಮೇ ಎರಡನೇ ವಾರ ತಕ್ಷಣ ಕಾರ್ಗಿಲ್‌ಗೆ ತೆರಳಲು ಸಜ್ಜಾಗುವಂತೆ ಹಿರಿಯ ಅಧಿಕಾರಿಗಳಿಂದ ಆದೇಶ ಬಂದಿತ್ತು. ತುರ್ತು ಬಳಕೆ ಯುದ್ಧ ಸಾಮಗ್ರಿ, ಕೆಲಕಾಲ ವಾಸಕ್ಕೆ ಅಗತ್ಯ ಬೀಳುವ ಆಹಾರ ವಸ್ತು, ಬಟ್ಟೆಬರೆಗಳನ್ನು ಮಿಲಿಟರಿ ವಾಹನಗಳಿಗೆ ತುಂಬುವ ಕಾರ್ಯ ರಾತ್ರಿ ನಡೆಯಿತು. ಒಂದು ಸಾಮಾನ್ಯ ಕಾರ್ಯಾಚರಣೆಗೆ ಅಗತ್ಯ ವಸ್ತುಗಳೊಂದಿಗೆ ಮಿಲಿಟರಿ ವಾಹನ ಮರುದಿನ ಮುಂಜಾನೆ ಕಾರ್ಗಿಲ್‌ಗೆ ಹೊರಟು ನಿಂತಿತು.

ಭಾರತೀಯ ಭೂಸೇನೆಯ ಬಂದೂಕು ಪಡೆಯ(ಆರ್ಟಿಲರಿ) ವಿಭಾಗದಲ್ಲಿ ಸರ್ವೇಯರ್ ಆಗಿದ್ದ ಮಂಗಳೂರು ಸುರತ್ಕಲ್‌ನ ಕಡಂಬೋಡಿಯ ಲೀಲಾಧರ್ ಅವರು 25 ವರ್ಷಗಳ ಹಿಂದೆ ನಡೆದ ಐತಿಹಾಸಿಕ ಕಾರ್ಗಿಲ್ ಕದನದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಭಾರತ್-ಪಾಕ್ ಗಡಿ ಭಾಗ ಕಾರ್ಗಿಲ್‌ನಲ್ಲಿ ಉಗ್ರರ ಕಾರ್ಯಾಚರಣೆ, ಉಭಯ ದೇಶಗಳ ಮಿಲಿಟರಿ ನಡುವೆ ಸಣ್ಣಪುಟ್ಟ ಬಂದೂಕು ದಾಳಿ ಸಾಮಾನ್ಯ ಸಂಗತಿ. ಆದ್ದರಿಂದ ಶ್ರೀನಗರದಿಂದ ಹೊರಟ ಮಿಲಿಟರಿ ಪಡೆಗೆ ಮುಂದೊಂದು ಯುದ್ಧ ನಡೆಯಲಿದೆ ಎನ್ನುವ ಸುಳಿವು ಕೂಡ ಇರಲಿಲ್ಲ!
ಬೋಫೋರ್ಸ್ ಸಹಿತ ವಿವಿಧ ಗನ್‌ಗಳನ್ನು, ಯುದ್ಧಕ್ಕೆ ಅವಶ್ಯಕ ಇತರ ಸಾಮಗ್ರಿಗಳನ್ನು ಸರ್ವೇಯರ್‌ಗಳ ತಂಡ ನಿಭಾಯಿಸುತ್ತದೆ. ಶತ್ರು ಪಡೆಯ ಮೇಲೆ ನೇರ ಯುದ್ಧ ನಡೆಸುವ ಕಾಲಾಳು ಪಡೆಯ ಹಿಂದೆ ಜತೆಯಲ್ಲಿ ಸ್ಥಳದ ನಕಾಶೆ ಜತೆ ಸರ್ವೇಯರ್‌ಗಳು ಸಾಗಬೇಕು. ಅಗತ್ಯ ಬಿದ್ದರೆ ಬಂದೂಕು ಹಿಡಿಯಲು ಕೂಡ ಸಜ್ಜಾಗಿರಬೇಕು. ಎರಡು ತಿಂಗಳಿಗೂ ಅಧಿಕ ಅವಧಿ ಸಾಗಿದ ಯುದ್ಧದಲ್ಲಿ ಲೀಲಾಧರ್ ಅವರು ಇದ್ದ ರೆೆಜಿಮೆಂಟಿನ ಬಂದೂಕುಗಳು ನಿರಂತರ ಗುಂಡಿನ ಮಳೆಗರೆದಿವೆ.

ಕಾರ್ಗಿಲ್ ಶ್ರೀನಗರದಿಂದ 205 ಕಿ.ಮೀ. ದೂರ ಇದೆ. ಹಿಮಾಲಯದ ಇತರ ಪ್ರದೇಶಗಳಲ್ಲಿ ಇರುವಂತೆ ಇಲ್ಲಿ ಸಮಶೀತೋಷ್ಣ ಹವಾಗುಣ ಇದೆ. ಬೇಸಿಗೆಯಲ್ಲಿ ಕೂಡ ಹಗಲು ತಂಪು ಹವೆ ಮತ್ತು ರಾತ್ರಿ ಕಡುಶೀತ ವಾತಾವರಣವಿರುತ್ತದೆ. ಚಳಿಗಾಲದಲ್ಲಿ ಸುದೀರ್ಘ ಮೈಕೊರೆಯುವ ಚಳಿ. ಉಷ್ಣಾಂಶ ಮೈನಸ್ 48 ಡಿಗ್ರಿಗೆ ಕುಸಿಯುತ್ತದೆ.

ಸಂದರ್ಭದ ಬಳಕೆ

ಅತಿಯಾದ ಚಳಿ ಇರುವ ಏಪ್ರಿಲ್, ಮೇ ತಿಂಗಳಲ್ಲಿ ಭಾರತದ ಭಾಗದಲ್ಲಿರುವ ಟೈಗರ್ ಹಿಲ್, ಮುಷ್ಕೊ ಕಣಿವೆ, ಬಟಾಲಿಕ್‌ನ ಪೋಸ್ಟ್‌ಗಳಲ್ಲಿ ಸಾಮಾನ್ಯವಾಗಿ ಸೈನಿಕರು ಇರುವುದಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು ಈ ಪೋಸ್ಟ್‌ಗಳನ್ನು ಪಾಕ್ ಸೈನಿಕರು ಹಾಗೂ ಉಗ್ರರು ಅತಿಕ್ರಮಿಸಿದ್ದರು.(ಈ ಸಂದರ್ಭ ಸಾಮಾನ್ಯವಾಗಿ ಅತ್ಯಂತ ಚಳಿ ಇರುವ ಪಾಕಿಸ್ತಾನದ ಕೆಲ ಪೋಸ್ಟ್‌ಗಳಲ್ಲೂ ಅಲ್ಲಿಯ ಸೈನಿಕರು ಇರುವುದಿಲ್ಲ). ಬಟಾಲಿಕ್ ವಲಯದ ಸ್ಥಳೀಯ ಕುರುಬನೊಬ್ಬ ಶತ್ರು ರಾಷ್ಟ್ರದ ಪಡೆ ಭಾರತೀಯ ಭಾಗವನ್ನು ಪ್ರವೇಶಿಸಿರುವ ಸುಳಿವನ್ನು ನೀಡಿದ್ದನು. ಕೂಡಲೇ ಭಾರತೀಯ ಗುಪ್ತಚರ ವಿಭಾಗ ಅಲರ್ಟ್ ಆಗಿದೆ.

10 ಮಂದಿಯ ಸಾವಿಗೆ ಸಾಕ್ಷಿ

ಲೀಲಾಧರ್ ಅವರಲ್ಲಿ ಯುದ್ಧ ಅವಧಿಯ ಮರೆಯಲಾಗದ ಹಲವು ನೆನಪುಗಳು ಇವೆ. ಒಂದು ದಿನ ಯೋಧರ ಗುಂಪು ಸೇಫ್ಟಿ ಬಂಕರ್‌ನಲ್ಲಿ ಇರುವ ಸಂದರ್ಭ ಹೊರಗೆ ಎದುರಿನ ಆಯಕಟ್ಟಿನ ಪ್ರದೇಶದಿಂದ ಪಾಕ್ ಪಡೆ ಹಾರಿಸಿದ ಶೆಲ್ ಒಂದು ಆಯತಪ್ಪಿ ಭಾರತೀಯ ಯೋಧರು ಅಡಗಿದ್ದ ಸೇಫ್ಟಿ ಬಂಕರ್ ಮೇಲೆ ಸಿಡಿದಿತ್ತು. ಇದರಿಂದ ಸೇಫ್ಟಿ ಬಂಕರ್ ಹೊರಗೆ ಇದ್ದ ಮೂವರು ಯೋಧರು ಸಾವನ್ನಪ್ಪಬೇಕಾಯಿತು. ಶೆಲ್ ಸಿಡಿದ ಪ್ರದೇಶದಿಂದ ಸುಮಾರು 2 ಕಿ.ಮೀ. ವ್ಯಾಪ್ತಿ ಪ್ರಾಣಹಾನಿ ತಂದೊಡ್ಡುತ್ತದೆ. ವಾಸ್ತವವಾಗಿ ಪಾಕ್ ಸೈನಿಕರು ಈ ಪ್ರದೇಶವನ್ನು ಗುರಿಯಾಗಿರಿಸಿ ಶೆಲ್ ದಾಳಿ ಮಾಡಿರಲಿಲ್ಲ. ಇದೇ ರೀತಿ ತೀರಾ ಸನಿಹದಲ್ಲಿ ಸುಮಾರು 10 ಮಂದಿ ತಮ್ಮವರ ಸಾವಿನ ಕ್ಷಣಗಳಿಗೆ ಲೀಲಾಧರ್ ಸಾಕ್ಷಿಯಾಗಿದ್ದಾರೆ. ಈ ರೀತಿ ಮೃತಪಟ್ಟವರಲ್ಲಿ ಕರ್ನಾಟಕದ ಬೆಳಗಾವಿಯ ಹವಾಲ್ದಾರ್ ಮಲ್ಲಯ್ಯ ಅವರೂ ಒಬ್ಬರು.

ಟೈಗರ್ ಹಿಲ್‌ನ ಸುರಕ್ಷಿತ ಪ್ರದೇಶವನ್ನು ಪಾಕ್ ಪಡೆ ಮೊದಲೇ ಆಕ್ರಮಿಸಿರುವುದು ಭಾರತೀಯ ಪಡೆಗೆ ಸವಾಲನ್ನು ಒಡ್ಡಿತ್ತು. ಅಲ್ಲಿಗೆ ಒಂದು ದಾರಿ ಮಾತ್ರ ಇದ್ದು, ಆ ಭಾಗ ಶತ್ರುವಿನ ವಶದಲ್ಲಿತ್ತು. ಉಳಿದ ಎಲ್ಲ ಕಡೆಗಳಿಂದ ಇರುವ ಗುಡ್ಡ ಏರಿ ಭಾರತೀಯ ಪಡೆ ನಡೆಸಿದ ಕಾರ್ಯಾಚರಣೆ ಅದ್ಭುತವಾಗಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಜುಲೈಯಲ್ಲಿ ಒಂದು ಸಂಜೆ ಶತ್ರುರಾಷ್ಟ್ರ ಅತಿಕ್ರಮಿಸಿದ ಎಲ್ಲ ಪೋಸ್ಟ್‌ಗಳನ್ನು ಭಾರತೀಯ ಸೇನೆ ಮರುವಶಪಡಿಸಿಕೊಂಡಿರುವ ಸುದ್ದಿಯನ್ನು ಸೇನೆ ಅಧಿಕೃತವಾಗಿ ಘೋಷಿಸಿತು.

ಆಹಾರ ಸಾಗಿಸಲು ಕತ್ತೆಗಳ ಬಳಕೆ

ಯುದ್ಧ ಭೂಮಿಯಲ್ಲಿ ಇರುವ ಯೋಧರಿಗೆ ಆಹಾರ ಪೂರೈಸುವುದು ತುಂಬಾ ಸವಾಲಾಗಿತ್ತು. ಅನೇಕ ಸಂದರ್ಭಗಳಲ್ಲಿ ಕತ್ತೆಗಳ ಮೂಲಕ ಆಹಾರ ಸಾಗಿಸಲಾಗುತ್ತದೆ. ಏಕೆಂದರೆ ಕಡಿದಾದ ಬೆಟ್ಟ ಪ್ರದೇಶಗಳಲ್ಲಿ ನಡೆಯುವುದೇ ದೊಡ್ಡ ಸವಾಲು. ಆಹಾರವನ್ನು ಹೊತ್ತು ಸಾಗುವುದು ಮತ್ತಷ್ಟು ಪ್ರಯಾಸಕರ ಆದ್ದರಿಂದ ಕತ್ತೆಗಳನ್ನು ಬಳಸಲಾಗುತ್ತಿತ್ತು. ಊಟಕ್ಕೆ ಸಾಮಾನ್ಯವಾಗಿ ಚಪಾತಿ, ಅನ್ನ ಇರುತ್ತಿತ್ತು. ಕೆಲವು ಪ್ರದೇಶಗಳಲ್ಲಿ ವಿಟಮಿನ್ ಮಾತ್ರೆ ತಿಂದು ಕೂಡ ಬದುಕಬೇಕಾದ ಪರಿಸ್ಥಿತಿ ಸೈನಿಕರಿಗೆ ಒದಗುತ್ತಿತ್ತು ಎಂದು ಲೀಲಾಧರ್ ಹೇಳಿದರು. ಸುರತ್ಕಲ್‌ನಲ್ಲಿರುವ ಮನೆಯಲ್ಲಿ ಅಂದು ಫೋನ್ ಇರಲಿಲ್ಲ. ಯುದ್ಧ ಸಂದರ್ಭ ನಮ್ಮ ಮನೆ ಹತ್ತಿರದ ಮನೆಗೆ ಫೋನ್ ಮಾಡಿ ವಾರಕ್ಕೊಮ್ಮೆ ಮನೆಯವರಲ್ಲಿ ಮಾತನಾಡುತ್ತಿದ್ದೆ. ತಮ್ಮ ವಿಭಾಗ ಯುದ್ಧ ನಡೆಯುವ ಸ್ಥಳದಿಂದ ತುಂಬಾ ಹಿಂದೆ ಇದೆ. ಏನೂ ಅಪಾಯ ಇಲ್ಲ ಎಂದು ಸುಳ್ಳು ಹೇಳುತ್ತಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net