ಬಿಸಿಲಿನಿಂದ ಬಸವಳಿದಿದ್ದ ಜನರ ಮೊಗದಲ್ಲಿ ಸಂತಸ

Published on

ಪಿರಿಯಾಪಟ್ಟಣ: ಬಿರು ಬಿಸಿಲಿನಿಂದ ಬೆಂದಿದ್ದ ತಾಲೂಕಿನ ವಿವಿಧೆಡೆ ಶುಕ್ರವಾರ ಸಂಜೆ ಮಳೆಯಾಗಿದ್ದು ರೈತರು ಸೇರಿದಂತೆ ಸಾರ್ವಜನಿಕರು ಸಂತಸಗೊಂಡಿದ್ದಾರೆ.

ಪಟ್ಟಣ ಸೇರಿದಂತೆ ಪಟ್ಟಣದ ಸುತ್ತಮುತ್ತಲಿನ ವ್ಯಾಪ್ತಿಯ ಗ್ರಾಮಗಳಾದ ತಾಲೂಕಿನ ಮೆಲ್ಲಹಳ್ಳಿ, ಕಂಪಲಾಪುರ, ಬೂದಿತಿಟ್ಟು, ಮಾಲಂಗಿ, ಆನೆಚೌಕೂರು ಅರಣ್ಯ ಪ್ರದೇಶ, ಹರವೆ, ಮಲ್ಲರಾಜಪಟ್ಟಣ, ಹುಣಸೆಕುಪ್ಪೆ, ಪಾರೆಕೊಪ್ಪಲು, ಅಂಕನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸಂಜೆ 4 ಗಂಟೆಯಿಂದ ಸುಮಾರು ಅರ್ಧ ಗಂಟೆ ಉತ್ತಮ ಮಳೆಯಾಗಿದ್ದು, ಸ್ವಲ್ಪ ಬಿಡುವು ನೀಡಿದ ಬಳಿಕ ಸಂಜೆ 5.30 ರಿಂದ 6.30ವರೆಗೂ ಸುಮಾರು ಒಂದು ಗಂಟೆ ಕಾಲ ಜೋರಾದ ಗುಡುಗು ಮಿಂಚಿನೊಂದಿಗೆ ತಾಲೂಕಿನ ಬೆಟ್ಟದಪುರ ಸೇರಿದಂತೆ ವಿವಿಧಡೆ ಉತ್ತಮ ಮಳೆಯಾಗಿದೆ.

ಬರ ಪರಿಸ್ಥಿತಿಯಿಂದ ಆತಂಕಗೊಂಡಿದ್ದ ತಾಲೂಕಿನ ರೈತರಿಗೆ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಶುಕ್ರವಾರ ಉತ್ತಮ ಮಳೆಯಾಗಿದ್ದು ರೈತರು ಸಂತಸಕೊಂಡಿದ್ದಾರೆ. ತಂಬಾಕು, ಶುಂಠಿ, ಮುಸುಕಿನ ಜೋಳ ಸೇರಿದಂತೆ ತೋಟಗಾರಿಕೆಯ ಬೆಳೆಗಳಿಗೆ ಶುಕ್ರವಾರದ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ರೈತರ ಮುಖದಲ್ಲಿ ಸಂತಸ ಮೂಡಿದೆ. ಉರಿ ಬಿಸಿಲು, ಬಿಸಿಗಾಳಿಯಿಂದಾಗಿ ಮನೆಯಲ್ಲಿಯೂ ಸಹ ಇರಲಾಗದೆ ಪರಿತಪಿಸುತ್ತಿದ್ದ ತಾಲೂಕಿನ ಜನತೆಗೆ ಈ ಮಳೆ ತಂಪಾದ ವಾತಾವರಣ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net