ಮುಂದಿನ ಪರೀಕ್ಷೆಗೂ ಕುದುರಿತ್ತು ಡೀಲ್!: ಕಿಂಗ್​ಪಿನ್ ರುದ್ರಗೌಡ ಅಳಿಯನ ಕರಾಮತ್ತು; 402 ಪಿಎಸ್​ಐ ನೇಮಕ ಅಧಿಸೂಚನೆ..

PSi
Published on

| ಬಾಬುರಾವ ಯಡ್ರಾಮಿ ಕಲಬುರಗಿ

ಈಗ ಅಷ್ಟೇ ಅಲ್ಲ, ಮುಂದೆ ನಡೆಯಲಿರುವ ಪಿಎಸ್​ಐಗಳ ನೇಮಕಾತಿಗೂ ಈಗಾಗಲೆ ಡೀಲ್ ಕುದುರಿತ್ತು! ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. 402 ಹುದ್ದೆಗಳ ನೇಮಕಕ್ಕೆ ಜನವರಿ ಅಂತ್ಯದಲ್ಲಿ  ಪರೀಕ್ಷೆ ನಡೆಸಲು ಗೃಹ ಇಲಾಖೆ ನೇಮಕಾತಿ ಮತ್ತು ತರಬೇತಿ ವಿಭಾಗ ನಿರ್ಧರಿಸಿತು. ಈ ವೇಳೆ ಮೊದಲಿನ ಪರೀಕ್ಷೆಯಲ್ಲಿ ಯಾರದ್ದು ಆಗಲ್ಲವೋ ಅಂತಹ ಗಿರಾಕಿಗಳನ್ನು ಹುಡುಕಿ ಮತ್ತು ಆಸಕ್ತರನ್ನು ಸಂರ್ಪಸಿ ರುದ್ರಗೌಡ ಅಳಿಯ ಪ್ರಕಾಶ ಮಾತುಕತೆ ನಡೆಸಿದ್ದ ಎಂದು ಗೊತ್ತಾಗಿದೆ. ವಾಮಮಾರ್ಗದ ಮೂಲಕ ಪಾಸ್ ಮಾಡಿಸಲು ಕೆಲವರೊಂದಿಗೆ ಡೀಲ್ ಕುದುರಿಸಿದ್ದ ಎನ್ನಲಾಗಿದೆ.

ರಾಜ್ಯ ಗೃಹ ಇಲಾಖೆ 545 ಪಿಎಸ್​ಐ ನೇಮಕ ಮತ್ತು 402 ಪಿಎಸ್​ಐ ನೇಮಕಾತಿಗಾಗಿ ಪ್ರತ್ಯೇಕ ಅಧಿಸೂಚನೆ ಪ್ರಕಟಿಸಿತ್ತು. ಮೊದಲು 545 ಹುದ್ದೆ ನೇಮಕ ಅಧಿಸೂಚನೆ ಪ್ರಕಟಿಸಿ ಅರ್ಜಿ ಸಲ್ಲಿಕೆ ಮುಗಿದ ಬೆನ್ನಲ್ಲೇ ಮತ್ತಷ್ಟು ಖಾಲಿ ಹುದ್ದೆ ಮತ್ತು ಕಲ್ಯಾಣ ಕರ್ನಾಟಕ ಕೋಟಾ ಸೇರಿ ಮತ್ತೊಂದು ಅಧಿಸೂಚನೆ ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಿತ್ತು. ಕಳೆದ ಅಕ್ಟೋಬರ್​ನಲ್ಲಿ 545 ಪಿಎಸ್​ಐಗಳ ನೇಮಕಕ್ಕೆ ಪರೀಕ್ಷೆ ನಡೆಸಲಾಗಿತ್ತು. ಆದರೆ ಪರೀಕ್ಷೆಗಳಲ್ಲಿ ಬ್ಲೂಟೂತ್ ಬಳಸಿ ಕರಾಮತ್ತು ಮಾಡಿ ಕೆಲವರಿಗೆ ನೇಮಕಾತಿ ಸಿಗುವಂತೆ ಮಾಡಲಾಗಿತ್ತು. ಅಕ್ರಮ ಬೆಳಕಿಗೆ ಬಂದು ಮುಖ್ಯಮಂತ್ರಿ, ಗೃಹ ಸಚಿವರಿಗೆ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ದೂರು ನೀಡಿದರು. ತನಿಖೆಗೆ ಒತ್ತಾಯ ಮಾಡಲಾರಂಭಿಸಿದರು. ಹೋರಾಟಗಳು ಶುರುವಾಗಿದ್ದರಿಂದ ಸರ್ಕಾರ ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮದ ತನಿಖೆ ಹೊಣೆಯನ್ನು ಸಿಐಡಿಗೆ ವಹಿಸಿಕೊಟ್ಟಿತು. ನಂತರ ಸರಣಿಯಾಗಿ ಅಕ್ರಮಕೋರರು ಬಲೆಗೆ ಬೀಳಲು ಶುರುವಾದ ಬಳಿಕ ಗ್ಯಾಂಗ್ ಲೆಕ್ಕಾಚಾರ ಉಲ್ಟಾ ಹೊಡೆಯಿತು.

ಜೈಲು ಸೇರಿರುವ ಕಿಂಗ್​ಪಿನ್ ಆರ್.ಡಿ.ಪಾಟೀಲ್ ಸೋದರಳಿಯ ಆಳಂದ ತಾಲೂಕಿನ ಜವಳಿ(ಡಿ) ಗ್ರಾಮದ ಪ್ರಕಾಶ ಉಡಗಿ ಮತ್ತು ಆರ್​ಡಿಪಿ ಗ್ಯಾಂಗ್ 545 ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮ ಬೆಳಕಿಗೆ ಬರುವುದಕ್ಕೆ ಮುನ್ನ ಕೆಲವರೊಂದಿಗೆ ಕೆಲಸ ಕೊಡಿಸುವ ಡೀಲ್ ನಡೆಸಿದ್ದಾರೆ ಎಂಬ ಬಗ್ಗೆ ಸಿಐಡಿ ವಿಚಾರಣೆಯಲ್ಲಿ ದಂಧೆಕೋರರು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಕ್ರಮ ನಡೆಸಿ ಯಶಸ್ಸು ಕಂಡಿದ್ದ ರುದ್ರಗೌಡ ಪಾಟೀಲ್ ಮುಂದಿನ ಪರೀಕ್ಷೆಯ ನೀಲಿನಕ್ಷೆ ಸಹ ರೂಪಿಸಿದ್ದ. ಈ ಮೂಲಕ ಎರಡನೇ ನೇಮಕ ಪರೀಕ್ಷೆಯಲ್ಲೂ ಕೈಚಳಕ ತೋರಿಸಲು ತಯಾರಿ ಮಾಡಿಕೊಂಡಿತ್ತು.

ಗಿರಾಕಿಗಳನ್ನು ಹುಡುಕುತ್ತಿದ್ದ ಆಪ್ತರು: ಬಂಧಿತ ಕಿಂಗ್​ಪಿನ್ ರುದ್ರಗೌಡ ಆಪ್ತ, ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಅಸ್ಲಂ ಮುಜಾವರ್ ಮತ್ತು ಕರಜಗಿಯ ಮುನಾಫ್ ರೇವೂರ ಅಲಿಯಾಸ್ ಮಹ್ಮದ್ ಅಯ್ಯುಬ್ ಸೇರಿ ಗ್ಯಾಂಗ್​ನಲ್ಲಿದ್ದ ಕೆಲವರು ಸೇರಿ ಪಿಎಸ್​ಐ ಪರೀಕ್ಷೆಗೆ ಅರ್ಜಿ ಹಾಕಿದವರನ್ನು ಗುರುತಿಸಿ ನೇಮಕಾತಿ ಮಾಡಿಸುವ ಭರವಸೆ ನೀಡುತ್ತಿದ್ದರು. ಈ ಮೂಲಕ ಆಕಾಂಕ್ಷಿ ಗಿರಾಕಿಗಳನ್ನು ಹುಡುಕಿ ವ್ಯವಹಾರ ಕುದುರಿಸಲು ರುದ್ರಗೌಡ ಇಲ್ಲವೆ ಆತನ ಅಳಿಯನನ್ನು ಭೇಟಿ ಮಾಡಿಸುತ್ತಿದ್ದರು ಎಂದು ಗೊತ್ತಾಗಿದೆ. ಅಸ್ಲಂ ಮತ್ತು ಮುನಾಫ್ ಇಬ್ಬರು ರುದ್ರಗೌಡ ಅತ್ಯಾಪ್ತರು. ಈ ಹಿಂದೆ ಡೀಲ್ ಕುದುರಿಸಿದ ಅಭ್ಯರ್ಥಿಗಳಿಗೆ ಬ್ಲೂಟೂತ್ ನೀಡುವುದು, ಪರ್ಯಾಯ ಸಿಮ್ ಕಾರ್ಡ್, ಅಭ್ಯರ್ಥಿಗಳನ್ನು ಆರ್.ಡಿ.ಪಾಟೀಲ್​ಗೆ ಭೇಟಿಯಂಥ ಕೆಲಸ ಮಾಡಿಕೊಂಡಿದ್ದರು. ಪಿಎಸ್​ಐ ಪರೀಕ್ಷೆ ಬರೆದಿದ್ದ ರವಿಶಂಕರ ಎಂಬಾತನಿಗೆ ಅಸ್ಲಂ ಕರೆ ಮಾಡಿ ಆವಾಜ್ ಹಾಕಿದ್ದು ಚರ್ಚೆಗೆ ಗ್ರಾಸವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net