

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಭಾಗವಹಿಸಿದ್ದ ಉದ್ರಿಕ್ತ ಮುಸ್ಲಿಂ ಯುವಕರ ಕೈಗೆ ಅವತ್ತು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಿಗದೇ ಹೋಗಿದ್ದು ಒಳ್ಳೆಯದೇ ಆಯಿತು. ಅಂದು ಗಲಭೆ ನಡೆದ ಸಂದರ್ಭದಲ್ಲಿ ಅವರು ಮನೆಯಲ್ಲಿ ಇಲ್ಲದ್ದರಿಂದ ಅವರ ಜೀವ ಉಳಿದಿದೆ!
ಅಖಂಡ ಶ್ರೀನಿವಾಸಮೂರ್ತಿ ಹಿಂದು-ಮುಸ್ಲಿಂ ಎರಡೂ ಸಮುದಾಯದವರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರೂ, ಮುಸ್ಲಿಂ ಯುವಕರು ಅಂದು ತೀವ್ರತರ ಗಲಭೆ ಉಂಟು ಮಾಡಿ ಮನೆಗೆ ಬೆಂಕಿ ಹಚ್ಚುವ ಮಟ್ಟಕ್ಕೆ ಹೋದದ್ದು ಸ್ವತಃ ಅಖಂಡ ಅವರಿಗೇ ಅಚ್ಚರಿ ತಂದಿತ್ತು. ಅವರ ಆ ರೀತಿಯ ವರ್ತನೆಗೆ ಕೇವಲ ಇಸ್ಲಾಂವಿರೋಧಿ ಫೇಸ್‌ಬುಕ್ ಕಾರಣವಲ್ಲ, ಬದಲಿಗೆ, ಸ್ಥಳೀಯ ರಾಜಕೀಯವೇ ಮುಖ್ಯ ಕಾರಣ ಎಂಬುದು ಇದೀಗ ಪೊಲೀಸ್ ಮೂಲಗಳಿಂದ ದೃಢಪಟ್ಟಿದೆ.
ಅಖಂಡ ಹೀಗೆಯೇ ರಾಜಕೀಯದಲ್ಲಿ ಮುಂದುವರಿದರೆ ತಾವು ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂದು ಅರಿತ ಕೆಲವು ಸ್ಥಳೀಯ ರಾಜಕಾರಣಿಗಳು ಗಲಭೆಗೆ ಕುಮ್ಮಕ್ಕು ನೀಡಿದ್ದಾರೆ. ಗಲಭೆಯ ಸ್ಥಳದಿಂದ ಅನತಿ ದೂರದಲ್ಲೇ ಮೊಕ್ಕಾಂ ಹಾಕಿ, ಹಿಂಸಾಚಾರ ಭುಗಿಲೇಳುವಂತೆ ಮಾಡಿದ್ದಾರೆ. ಅದಕ್ಕೆ ಬೇಕಾದ ಹಣಕಾಸಿನ ನೆರವನ್ನೂ ನೀಡಿದ್ದಾರೆ ಎಂಬುದರ ಕುರಿತು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಮಧ್ಯಂತರ ದೋಷಾರೋಪ ಪಟ್ಟಿಯಲ್ಲಿ ಕೆಲವು ರಹಸ್ಯಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇಡೀ ಗಲಭೆಯ ಹಿಂದೆ ಮಾಜಿ ಮೇಯರ್ ಸಂಪತ್ ರಾಜ್, ಇವರ ಆಪ್ತ ಅರುಣ್ ರಾಜ್, ಕಾರ್ಪೊರೇಟರ್ ಅಬ್ದುಲ್ ರಕೀಮ್ ಜಾಕೀರ್, ಎಸ್‌ಡಿಪಿಐನ ಮುಖಂಡ ಮುಜಾಮಿಲ್ ಇವರ ಹೆಸರು ತಳುಕು ಹಾಕಿಕೊಂಡಿವೆ.
ಆ. 5ರಂದು ಅನ್ಸಿನ್ ಮೊಹಲ್ಲಾ ಬಳಿ ರಹಸ್ಯ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆ. 6ರಂದು ಶಾಸಕರ ವಿರುದ್ಧ ಪ್ರತಿಭಟನೆಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ. ಆ. 10ರಂದು ಮತ್ತೊಮ್ಮೆ ಪ್ರತಿಭಟನೆಗೆ ತಯಾರಿ ನಡೆಸಿದ್ದರೂ ಪೊಲೀಸರು ಅನುಮತಿ ನೀಡಿರಲಿಲ್ಲ. ಅಂತಿಮವಾಗಿ ನವೀನ್ ಫೇಸ್ಬುಕ್ ಪೋಸ್ಟ್ ಹೆಸರಿನಲ್ಲಿ ಗಲಾಟೆ ನಡೆಸಲು ನಿರ್ಧರಿಸಿದ್ದರು. ಆಖಂಡ ಶ್ರೀನಿವಾಸಮೂರ್ತಿ ಹೆಸರು ಹಾಳು ಮಾಡುವ ಉದ್ದೇಶದಿಂದ ನಡೆದ ಪೂರ್ವ ನಿಯೋಜಿತ ಸಂಚು ಇದು ಎನ್ನಲಾಗುತ್ತಿದೆ.
ಈ ಮಧ್ಯೆ, ಚಾರ್ಜ್‌ಶೀಟ್ ಸಲ್ಲಿಕೆಯಾದರೂ ಪ್ರಮುಖ ಆರೋಪಿಗಳಾದ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಮಾಜಿ ಕಾರ್ಪೊರೇಟರ್ ಝಾಕೀರ್ ಬಂಧನವಾಗಿಲ್ಲ ಎಂದು ಡಿ.ಜೆ. ಹಳ್ಳಿಯಲ್ಲಿ ಮಂಗಳವಾರ ಅಖಂಡ ಬೆಂಬಲಿಗರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.