

ಅರಕಲಗೂಡು: ದೇಶಕ್ಕೆ ಅನ್ನ, ಆಹಾರ ನೀಡುವ ರೈತರ ಗಂಡು ಮಕ್ಕಳಿಗೆ ಹೆಣ್ಣು ಕೊಟ್ಟು ಮದುವೆ ಮಾಡುವ ಕಾರ್ಯದಂತಹ ಪುಣ್ಯದ ಕೆಲಸ ಮತ್ತೊಂದಿಲ್ಲ. ಈ ವಿಚಾರದಲ್ಲಿ ಯಾರೂ ಕೂಡ ಹಿಂದೇಟು ಹಾಕಬಾರದು ಎಂದು ಶಾಸಕ ಎ. ಮಂಜು ಮನವಿ ಮಾಡಿದರು.
ತಾಲೂಕಿನ ರಾಮನಾಥಪುರ ಶಿವರುದ್ರಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಏನನ್ನು ಎಣಿಸಿದೆ ಎಲ್ಲರಿಗೂ ಊಟ ನೀಡುವ ರೈತರೇ ನಿಜವಾದ ಶಕ್ತಿವಂತರು. ಇಂತಹ ರೈತರ ಮಕ್ಕಳಿಗೆ ಆದಾಯದ ನೆಪ ಮುಂದಿಟ್ಟು ಹೆಣ್ಣು ಕೊಡಲು ನಿರಾಕರಿಸುವುದು ಸರಿಯಲ್ಲ. ಇನ್ನಾದರೂ ರೈತರ ಮಕ್ಕಳಿಗೆ ಗೌರವ ಕೊಡುವ ಮೂಲಕ ಸಮಾಜ ಬದಲಾವಣೆ ಕಾಣಬೇಕು ಎಂದರು.
ಕೃಷಿ ಸಂಬಂಧಿತ ಇಲಾಖೆಗಳು ದುಡಿಯುವ ರೈತರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕು. ರೈತರಿಗೆ ಅನ್ಯಾಯ ಮಾಡಿದರೆ ನಮಗೆ ನಾವೇ ಮೋಸ ಮಾಡಿಕೊಂಡಂತಾಗುತ್ತದೆ. ಸೌಕರ್ಯಗಳನ್ನು ಉಪಯೋಗಿಸಿಕೊಳ್ಳುವುದು ರೈತರ ಜವಾಬ್ದಾರಿ ಆಗಬೇಕು. ಶೇ. 90ರಷ್ಟು ಸಬ್ಸಿಡಿ ಸೌಲಭ್ಯ ಇರುವ ಹನಿ ನೀರಾವರಿ ಹೊಂದುವ ಮುಖೇನ ವೈಜ್ಞಾನಿಕ ಬೇಸಾಯ ಪದ್ಧತಿ ಅನುಸರಿಸಬೇಕು ಎಂದು ಸಲಹೆ ನೀಡಿದರು.
ರೈತರು ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಪರ್ಯಾಯ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಲಾಭ ಕಂಡುಕೊಳ್ಳಬೇಕು. ಮುಖ್ಯ ಹೈನುಗಾರಿಕೆಯನ್ನು ಉಪ ಕಸುಬಾಗಿ ಅವಲಂಬಿಸಿ ಕೃಷಿಯಲ್ಲಿ ಆಗುವ ನಷ್ಟ ಭರಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ.ಯೋಗಣ್ಣ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಅಗತ್ಯವಿದೆ. ಕನಿಷ್ಠ ಬೆಂಬಲ ಬೆಲೆ ನೀತಿ ಜಾರಿಯಾಗದ ಹೊರತು ಅನ್ನದಾತರ ಉದ್ಧಾರ ಅಸಾಧ್ಯ. ಕೇಂದ್ರ ಸರ್ಕಾರ ಈ ಕುರಿತು ಕಾಯ್ದೆ ರೂಪಿಸಿ ರೈತ ದಿನಾಚರಣೆಗೆ ಹೊಸ ಸಂದೇಶ ಸಾರಬೇಕು. ಇಲ್ಲವಾದರೆ ರೈತರಿಗೆ ಏನು ಮಾಡಿದರೂ ವ್ಯರ್ಥ ಎಂದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕೆ.ಜೆ.ಕವಿತಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿದರು.
ಕೃಷಿ ಸಾಧಕರಾದ ಗೋವಿಂದೇಗೌಡ, ದೇವೇಗೌಡ, ಮಂಜುನಾಥ್, ನರಸೇಗೌಡ, ಪೂರ್ಣಿಮಾ, ಕವಿತಾ ರುದ್ರೇಶ್, ಕೆ.ಟಿ.ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು.
ತಾಪಂ ಇಒ ಪ್ರಕಾಶ್, ಗ್ರಾಪಂ ಉಪಾಧ್ಯಕ್ಷ ಮಾದೇಶ್, ಮುಖಂಡರಾದ ಮಗ್ಗೆ ರಾಜೇಗೌಡ, ಆರ್.ನಿಂಗೇಗೌಡ, ಹರಳಹಳ್ಳಿ ತಮ್ಮೇಗೌಡ, ಮುಗುಳೂರು ಕೃಷ್ಣೇಗೌಡ, ಬಂದಿಗನಹಳ್ಳಿ ರವಿ, ವೀರೇಂದ್ರ, ಕಮಲಮ್ಮ, ಪುಟ್ಟರಾಜು, ಸಿದ್ದಲಿಂಗೇಶ್ವರ, ಸೀತಾರಾಮ್ ಭಟ್ ಇತರರು ಇದ್ದರು.