ತಾಯಿ ಪ್ರೇಮ, ಭಾಷೆ ಭಕ್ತಿ ಇರಬೇಕು

Bdk_Language
Published on

ಬದಿಯಡ್ಕ: ನಮ್ಮ ಮಾತೃಭಾಷೆಗೆ ಕುತ್ತು ಬಂದಲ್ಲಿ ನಾವು ಎದ್ದೇಳಬೇಕು. ತಾಯಿ ಪ್ರೇಮ, ಭಾಷೆ ಭಕ್ತಿ ಯಾವಾಗಲೂ ನಮ್ಮಲ್ಲಿರಬೇಕು. ಬಹಳಷ್ಟು ಕನ್ನಡ ಅಭಿಮಾನಿಗಳು ಕಾಸರಗೋಡಿನಲ್ಲಿ ಇದ್ದು, ನಿರಂತರ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.

ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನ ವಳಮಲೆ ಬದಿಯಡ್ಕ ಆಶ್ರಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ವಳಮಯಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಗಂಗಾಧರ ಬಲ್ಲಾಳ್ ಅಡ್ವಳ, ಆಯಿಷಾ ಎ.ಎ. ಪೆರ್ಲ, ವೈದ್ಯ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಸಂಘಟಕ ಅಶ್ವತ್ಥ್ ಪೂಜಾರಿ ಲಾಲ್‌ಬಾಗ್ ಪೈವಳಿಕೆ ಮತ್ತು ಯೋಗ ಶಿಕ್ಷಕಿ ತೇಜಕುಮಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಪರಮೇಶ್ವರ ನಾಯ್ಕ ಅರ್ತಲೆ ಅವರ 12ನೇ ಕೃತಿ ಸ್ನೇಹಾಮೃತವನ್ನು ಬ್ಯಾಂಕ್ ನಿವೃತ್ತ ಪ್ರಬಂಧಕ ಟಿ.ಸುಬ್ರಾಯ ನಾಯ್ಕ ಬಿಡುಗಡೆಗೊಳಿಸಿದರು.

ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಖಂಡ ಕಲ್ಲಗ ಚಂದ್ರಶೇಖರ ರಾವ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಸಾಮಾಜಿಕ ಕಾರ್ಯಕರ್ತ ಜಯದೇವ ಖಂಡಿಗೆ ಶುಭಹಾರೈಸಿದರು. ತಾರಾನಾಥ ರೈ, ಸಮಾಜ ಸೇವಕ ಪ್ರತೀಕ್ ಆಳ್ವ, ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನದ ಕೋಶಾಧಿಕಾರಿ ರಮೇಶ್ ಶೆಟ್ಟಿ ಗೌರಿಕ್ಕೋಡಿ, ಪ್ರೊ.ಎ.ಶ್ರೀನಾಥ್ ಉಪಸ್ಥಿತರಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ ಸ್ವಾಗತಿಸಿದರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗೋಪಾಲಕೃಷ್ಣ ವಂದಿಸಿದರು. ಕೃಷ್ಣ ಡಿ.ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net