

ಮೈಸೂರು: ತಂತ್ರಜ್ಞಾನದಿಂದ ಒಳಿತು, ಕೆಡುಕು ಎರಡೂ ಇರುವ ಹಿನ್ನೆಲೆಯಲ್ಲಿ ಯಾವ ರೀತಿ ತಂತ್ರಜ್ಞಾನಗಳನ್ನು ಬಳಸಬೇಕು ಎಂಬುದನ್ನು ಅರಿತುಕೊಳ್ಳುವುದು ಮುಖ್ಯ ಎಂದು ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಬಿಸಿಎ ಕೋರ್ಸ್ ಹಾಗೂ ಕಂಪ್ಯೂಟರ್ ಪ್ರಯೋಗಾಲಯವನ್ನು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ತಂತ್ರಜ್ಞಾನ ಬಳಕೆ ಅನಿವಾರ್ಯವಾಗಿದ್ದು, ತಂತ್ರಜ್ಞಾನವನ್ನು ಸಮಾಜ ಹಾಗೂ ದೇಶದ ಒಳಿತಿಗೋಸ್ಕರ ಬಳಕೆ ಮಾಡಬೇಕು ಎಂದರು.
ಬಿಸಿಎ ಕೋರ್ಸ್ ಹಾಗೂ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟಿಸಿದ ಮೈಸೂರು ವಿಶ್ವ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಎಸ್. ಗುರು ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಕಂಡಿದ್ದು, ಇದು ನಮ್ಮ ಬದುಕಿನಲ್ಲಿ ಹಲವಾರು ಬದಲಾವಣೆಗೆ ಕಾರಣವಾಗಿದೆ. ಪ್ರತಿಯೊಬ್ಬರು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಸಮಾಜದಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ವಾಣಿವಿಲಾಸ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷೆ ಭಾರತಿ ಶ್ರೀಧರ್‌ರಾಜೇ ಅರಸ್, ಕಾರ್ಯದರ್ಶಿ ಮಹೇಶ್ ಅರಸ್, ಜಂಟಿ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಪ್ರಾಂಶುಪಾಲ ಜಗದೀಶ್ ಕೃಷ್ಣ ಇದ್ದರು.