ಅಮೆರಿಕಾದಂತೆ ಸಂವಹನ ಸಮಸ್ಯೆಯ ಮಕ್ಕಳಿಗೆ ಪ್ರತ್ಯೇಕ ತರಗತಿ ಇರಲಿ

mysore
Published on

ಮೈಸೂರು; ಸಂವಹನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಅಮೆರಿಕದ ಎಲ್ಲ ಶಾಲೆಗಳಲ್ಲೂ ಪ್ರತ್ಯೇಕ ತರಗತಿ ತೆರೆಯಲಾಗಿದೆ. ಸಂವಹನಕ್ಕೆ ಅನುಕೂಲವಾಗಲು ಅತ್ಯಾಧುನಿಕ ಸಾಧನ ನೀಡಲಾಗಿದೆ. ಭಾರತದಲ್ಲೂ ಈ ರೀತಿಯ ಪ್ರಯೋಗ ಆಗಬೇಕು ಎಂದು ಅಮೆರಿಕದ ಸಂವಹನ ಸಾಧನಗಳ ತಂತ್ರಜ್ಞ ಡೇವಿಡ್ ಗೋಲ್ಡ್ ಬರ್ಗ್ ಹೇಳಿದರು.


ಅಂತಾರಾಷ್ಟ್ರೀಯ ಪರ್ಯಾಯ ಸಂವಹನ ಮತ್ತು ವರ್ಧನೆ ಸೊಸೈಟಿ(ಐಸಾಕ್) ವತಿಯಿಂದ ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ವಾಕ್ ಸಮ್ಮೇಳನದಲ್ಲಿ ಮಾತನಾಡಿದರು.


ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಮಕ್ಕಳು ವಾಕ್ ಮತ್ತು ಶ್ರವಣ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಲೋಪ ಸರಿಪಡಿಸಲು ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.


ವಾಕ್ ಮತ್ತು ಶ್ರವಣ ಸಮಸ್ಯೆ ನಿವಾರಣೆಗೆ ಅನೇಕ ಸಾಧನಗಳು, ಉಪಕರಣಗಳು ಅಭಿವೃದ್ಧಿಗೊಂಡಿವೆ. ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಇವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.


ಎಲ್ಲ ಮಕ್ಕಳಂತೆ, ಈ ಸಮಸ್ಯೆ ಹೊಂದಿರುವ ಮಕ್ಕಳಿಗೂ ಕಲಿಕೆ ಹಾಗೂ ಅವಕಾಶಗಳು ಸಮಾನವಾಗಿ ದೊರೆಯಬೇಕು. ಆಗ ಇವರೂ ಸಮಾಜದ ಮುಖ್ಯವಾಹಿನಿಗೆ ಬರಲು ಮತ್ತು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.

ಅಂಗವಿಕರಿಗೂ ಎಲ್ಲರಂತೆ ಸಮಾನ ಅವಕಾಶ ಸಿಗಲಿ:


ಕೋಲ್ಕತ್ತದ ಭಾರತೀಯ ಮಿದುಳು ವಾತ (ಸೆರಿಬ್ರಲ್ ಪಾಲ್ಸಿ) ಸಂಸ್ಥೆಯ ಸ್ಥಾಪಕಿ, ಐಸಾಕ್ ಸಂಸ್ಥೆಯ ಮಾಜಿ ಅಧ್ಯಕ್ಷೆ ಪದ್ಮಶ್ರೀ ಡಾ.ಸುಧಾ ಕೌಲ್ ಮಾತನಾಡಿ, ಅಂಗವಿಕಲರ ಹಕ್ಕುಗಳನ್ನು ರಕ್ಷಿಸಬೇಕು. ಅವರ ಸಮಸ್ಯೆಗಳನ್ನು ನಿವಾರಿಸುವ ಕೆಲಸ ಆಗಬೇಕು ಎಂದರು.
ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಹಾಗೂ ಅಂಗವಿಕರಿಗೆ ಎಲ್ಲರಂತೆ ಸಮಾನ ಅವಕಾಶ ಸಿಗಲು ಸಂವಹನಕಾರರು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.


ವಿಶೇಷ ಮಕ್ಕಳು ಅನೇಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇವರ ಆರೈಕೆ, ಪಾಲನೆ ಸವಾಲಿನ ಹಾಗೂ ಕಷ್ಟಕರ ಕೆಲಸವೇ ಸರಿ. ಆಟಿಸಂ, ಮಿದುಳು ವಾತ, ಬಹು ಅಂಗಾಂಗ ವೈಕಲ್ಯ ಹೊಂದಿರುವ ಮಕ್ಕಳೊಂದಿಗೆ ಬೆರೆಯಬೇಕು. ಸಂವಹನ ನಡೆಸಿ, ಕೌಶಲ ಕಲಿಸಿ ಮನನ ಮಾಡಬೇಕು. ಮಕ್ಕಳ ಕುಟುಂಬ ಸದಸ್ಯರಿಗೂ ಆತ್ಮಸ್ಥೈರ್ಯ ತುಂಬಬೇಕು ಎಂದು ಕಿವಿಮಾತು ಹೇಳಿದರು.


ಸಂವಹನಕಾರರಿಗೆ ಅರಿವು ಹಾಗೂ ಜ್ಞಾನ ಎರಡೂ ಮುಖ್ಯವಾಗುತ್ತದೆ. ದಶಕದಿಂದ ಕೆಲಸ ಮಾಡಿರುವ ಅನುಭವ ಬಳಸಿಕೊಳ್ಳಬೇಕು. ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಎಲ್ಲರಂತೆ ಬದುಕು ನಡೆಸುವ ಆಶ್ವಾಸನೆಯನ್ನು ಬಿತ್ತಬೇಕು. ಸುಂದರ ಭವಿಷ್ಯವನ್ನು ಸೃಷ್ಟಿಸುವ ಜವಾಬ್ದಾರಿ ಆಯಿಷ್ ಸೇರಿದಂತೆ ವಿಶೇಷ ಮಕ್ಕಳ ಆರೈಕೆ ಮಾಡುವ ಶಿಕ್ಷಕರು, ಸಂವಹನಕಾರರು, ವೈದ್ಯರ ಮೇಲಿದೆ ಎಂದು ತಿಳಿಸಿದರು.


ಐಸಾಕ್ ಅಧ್ಯಕ್ಷೆ ಭಾವನಾ ಬೊಟ್ಟ ಮಾತನಾಡಿ, ದೇಶದ ಎಲ್ಲ ನಾಗರಿಕರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಅಂತೆಯೆ, ವಾಕ್ ಮತ್ತು ಶ್ರವಣ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರ ಅಭಿವ್ಯಕ್ತಿಗೂ ಅವಕಾಶ ದೊರೆಯಬೇಕು. ಐಸಾಕ್ ಸಂಸ್ಥೆ ಅದಕ್ಕಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.


ಸಮ್ಮೇಳನದ ಸಂಯೋಜಕ ಪ್ರೊ.ಅಜೀಷ್ ಕೆ.ಅಬ್ರಾಹಂ, ಕಾರ್ಯದರ್ಶಿ ಡಾ.ರುಬೇನ್ ಟಿ.ವರ್ಗೀಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net