

ಹುಬ್ಬಳ್ಳಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ಗೆ ಬರುತ್ತಾರೆ ಎನ್ನುವುದು ಸುಳ್ಳು. ನಮಗೇಕೆ ಅವರ ಪಕ್ಷದವರ ಸುದ್ದಿ? ಅವರುಂಟು, ಅವರ ಪಕ್ಷ ಉಂಟು. ಅವರಿಗೆ ಒಳ್ಳೆಯದಾಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಎಂಎಲ್‌ಸಿ ಸ್ಥಾನಗಳು ಖಾಲಿ ಇವೆ. ನಾಳೆ ಅಥವಾ ನಾಡಿದ್ದು ಭರ್ತಿ ಆಗಲಿದೆ. ಸಂಪುಟ ಪುನಾರಚನೆ ಸುಳ್ಳು ಸುದ್ದಿ. ಅದೆಲ್ಲ ಯಾವುದೂ ಆಗಲ್ಲ. ಮಾಧ್ಯಮಗಳಿಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಸಂಪುಟ ಪುನಾರಚಣೆ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟಿದ್ದು. ಅವರೇನು ಮಾಡುತ್ತಾರೋ ಅದೇ ಅಂತಿಮ ಎಂದರು. ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯವರು ಕೆಲ ಬೇಡಿಕೆಯುಳ್ಳ ಮನವಿ ಕೊಟ್ಟಿದ್ದಾರೆ. ಅದೆಲ್ಲವನ್ನೂ ಗಮನಿಸಿದ್ದೇನೆ ಎಂದ ಡಿಕೆಶಿ, ವಕ್ಫ್ ಮಸೂದೆ ಅನುಮೋದನೆ ಕುರಿತ ಪ್ರಕ್ರಿಯೆಯನ್ನು ನಿರಾಕರಿಸಿದರು.
ದೆಹಲಿಯಲ್ಲಿ ಕರ್ನಾಟಕ ಭವನ ಉದ್ಘಾಟನೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲು ಸರಿ ಇರಲಿಲ್ಲ. ಹೀಗಾಗಿ ಬಹಳ ದಿನಗಳ ಹಿಂದೆ ಆಗಬೇಕಿದ್ದ ಉದ್ಘಾಟನೆ ಬುಧವಾರ ಸಂಜೆ ಆಗುತ್ತಿದೆ. ಮಧ್ಯದಲ್ಲಿ ಅಧಿವೇಶನ ಬಂತು. ಹೀಗಾಗಿ ವಿಳಂಬವಾಯಿತು ಎಂದರು.