

ಶಿವಮೊಗ್ಗ: ಶಿಮುಲ್(ಶಿವಮೊಗ್ಗ ಹಾಲು ಒಕ್ಕೂಟ)ದಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದರೂ ಮಾಹಿತಿಯನ್ನು ಮುಚ್ಚಿಡಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಸಿದ್ದಲಿಂಗಪ್ಪ ದೂರಿದರು.
ಕಳೆದ ಆರು ತಿಂಗಳಿನಿಂದ ಶಿಮುಲ್ ಮಾರುಕಟ್ಟೆ ವಿಭಾಗದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಮಗ್ರವಾಗಿ ತನಿಖೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕಿದೆ ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿದಿನ ಸಂಜೆ ಡೀಲರ್‌ಗಳು ಹಾಲಿನ ಇಂಡೆಂಟ್ ಹಾಕುವಾಗ ಒಕ್ಕೂಟಕ್ಕೆ ಆನ್‌ಲೈನ್ ಮೂಲಕ ಹಣ ಸಂದಾಯ ಮಾಡುತ್ತಾರೆ. ಸರ್ವರ್ ಡೌನ್ ಇರುವಾಗ ಸಂಬಂಧಿಸಿದ ಅಧಿಕಾರಿ ಖಾತೆಗೆ ಹಣ ಹಾಕಿ ತದನಂತರ ಒಕ್ಕೂಟಕ್ಕೆ ಜಮೆ ಮಾಡುತ್ತಾರೆ. ಆದರೆ ಕಳೆದ ಆರು ತಿಂಗಳಿನಿಂದ ಅಧಿಕಾರಿಗಳು ಡೀಲರ್‌ಗಳಿಂದ ಹಾಕಿಸಿಕೊಂಡ ಹಣವನ್ನು ಒಕ್ಕೂಟಕ್ಕೆ ಜಮಾ ಮಾಡದೆ ಅವ್ಯವಹಾರ ನಡೆಸಿದ್ದು ಸುಮಾರು ಎರಡು ಕೋಟಿ ರೂ.ನಷ್ಟು ಅವ್ಯವಹಾರ ನಡೆದಿದೆ ಎಂದು ದೂರಿದರು.
ಅಕೌಂಟ್ ಕಮಿಟಿ ಮೀಟಿಂಗ್ ನಡೆದಿದ್ದರೂ ಅಧಿಕಾರಿಗಳು ಪ್ರತಿನಿತ್ಯ ಜಮಾ-ಖರ್ಚು ಪರಿಶೀಲನೆ ಮಾಡಿ ವ್ಯವಹಾರ ನಡೆಸುತ್ತಿರುವಾಗಲೂ ಇದು ಹೇಗೆ ನಡೆಯಿತು ಎಂಬುದು ಯಕ್ಷಪ್ರಶ್ನೆ. ಇದರಲ್ಲಿ ಆಡಳಿತ ಮಂಡಳಿಯವರು ಕೂಡ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಆರೋಪಿಸಿದರು.
ಹೈನುಗಾರಿಕೆಯನ್ನೇ ನಂಬಿರುವ ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸಿಕೊಡಬೇಕು. ಹಾಲು ಒಕ್ಕೂಟ ನಷ್ಟದಲ್ಲಿದೆ ಎಂದು ತಿಳಿದು ಕಳೆದ ತಿಂಗಳು ಹಾಲಿನ ದರವನ್ನು ಒಂದು ರೂ. ಕಡಿಮೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಕುಮಾರ ನಾಯ್ಡು, ಪಿ.ಕೆ.ರಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.