

ಶಿವಮೊಗ್ಗ: ಸಾಹಿತ್ಯ ಕೃತಿ ಯಾವುದು, ಅದು ಹೇಗಿರಬೇಕು ಎಂಬ ಬಗ್ಗೆಯೇ ಇನ್ನೂ ಜಿಜ್ಞಾಸೆಗಳಿವೆ. ಯಾವುದೇ ಒಂದು ಕೃತಿ ಸಾಹಿತ್ಯ ರೂಪ ಪಡೆಯಬೇಕಾದರೆ ಅದಕ್ಕೆ ಹಲವು ಸಮಸ್ಯೆಗಳು, ನ್ಯೂನತೆಗಳು ಉಂಟಾಗುತ್ತವೆ ಎಂದು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಹ್ಯಾದ್ರಿ ಕಲಾ ಕಾಲೇಜು ಆಶ್ರಯದಲ್ಲಿ ಸಾಹಿತ್ಯ ವಿಮರ್ಶೆ ಕುರಿತ ಅನುಸಂಧಾನದ ನೆಲೆಗಳು ವಿಚಾರ ಸಂಕಿರಣದಲ್ಲಿ ಆಶಯ ಭಾಷಣ ಮಾಡಿದ ಅವರು, ಧರ್ಮ ಕೃತಿಯೊಂದು ಕಾಲಾಂತರದಲ್ಲಿ ಸಾಹಿತ್ಯ ಕೃತಿಯಾಗಿ ರೂಪುಗೊಳ್ಳುವ ಎಲ್ಲ ಸಾಧ್ಯತೆಗಳು ಇವೆ ಎಂದರು.
ನಾವು ಸಾಮಾನ್ಯವಾಗಿ ಒಂದು ಸಾಹಿತ್ಯ ಕೃತಿಯನ್ನು ಓದು, ವಿವರಣೆ, ವ್ಯಾಖ್ಯಾನ, ಮೌಲ್ಯಮಾಪನ ಎಂದು ವಿಂಗಡಿಸಿ ಸರಳವಾಗಿ ಹೇಳುತ್ತೇವೆ. ಸಾಮಾನ್ಯ ಜ್ಞಾನದ ಮೇಲೆ ತೀರ್ಮಾನವಾಗುವ ಒಂದು ಸಾಹಿತ್ಯ ಕೃತಿಗೆ ಅದರ ಸುತ್ತಲೂ ಅನೇಕ ಚೌಕಟ್ಟುಗಳು, ಸಂಧಾನ, ಅನುಸಂಧಾನಗಳು ಉಂಟಾಗಿ ಗೊಂದಲವೂ ಆಗುತ್ತದೆ ಎಂದು ಹೇಳಿದರು.
ನಾವು ವಚನ ಸಾಹಿತ್ಯವನ್ನು ಈಗ ಸಾಹಿತ್ಯಿಕ ಕೃತಿ ಎಂದು ಗುರುತಿಸುತ್ತೇವೆ. ಆದರೆ ಅಂದಿನ ಕಾಲದಲ್ಲಿ ಅದು ಸಾಹಿತ್ಯ ಕೃತಿಯಾಗದೆ ಒಂದು ಧರ್ಮಗ್ರಂಥವಾಗಿತ್ತು. ಒದು ಸಮುದಾಯಕ್ಕೆ ಸೇರಿದ ಕೃತಿ ಎಂದೂ ಬಿಂಬಿಸಲಾಗುತ್ತಿತ್ತು. ಮೌಖಿಕ ಕೃತಿಯೊಂದು ಮುದ್ರಣಕ್ಕೆ ಬರುವಾಗ ಹಲವು ಬದಲಾವಣೆಗಳು ಆಗುತ್ತವೆ ಎಂದರು.
ವಚನಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅವೆಲ್ಲ ತಾಳೆಗರಿಯಲ್ಲಿದ್ದವು. ವಚನಕಾರರು ಅವುಗಳನ್ನು ಒಂದು ಛಂದಸ್ಸಿನ ಬಂಧದಲ್ಲಿ ಇಟ್ಟಿದ್ದರು. ಅವರಿಗೆ ಅದು ಕಾವ್ಯವಾಗಬೇಕು ಎಂದು ಸ್ಪಷ್ಟವಾಗಿ ಅನಿಸಿತ್ತು. ಆದರೆ ಅಂತಹ ಕೃತಿಗಳು ಒಂದು ಸಮುದಾಯಕ್ಕೆ ಸೇರಿದ್ದು ಅದರಿಂದ ಬಿಡುಗಡೆ ಹೊಂದಿ ಒಂದು ಸಾಹಿತ್ಯ ಕೃತಿಯಾಗುತ್ತದೆ ಎಂದು ಬಣ್ಣಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಕೆ.ಬಿ.ಧನಂಜಯ್ ಮಾತನಾಡಿದರು. ಪ್ರಾಧ್ಯಾಪಕರಾದ ಸಬಿತಾ ಬನ್ನಾಡಿ, ಎನ್.ವಸುಂಧರಾ, ಡಾ. ಬಿ.ಎನ್.ಪ್ರಕಾಶ್, ನಿವೃತ್ತ ಪ್ರಾಧ್ಯಾಪಕ ಡಾ. ಕೇಶವಮೂರ್ತಿ, ಚಿಂತಕ ಡಾ. ಕೃಷ್ಣಮೂರ್ತಿ, ಪ್ರಾಧ್ಯಾಪಕ ಜಿ.ಆರ್.ಲವ, ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಡಾ. ಬಿ.ಎಂ.ಪುಟ್ಟಯ್ಯ, ಹಾಲಮ್ಮ ಉಪಸ್ಥಿತರಿದ್ದರು.