

ಬೆಂಗಳೂರು:ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ರಮ್, ವಿಸ್ಕಿ,ಬ್ರಾಂಡಿ ಮದ್ಯಗಳ ಕೊರತೆಯಾಗಿದೆ.
ರಾಜ್ಯದಲ್ಲಿ 32ಗಿಂತ ಅಧಿಕ ಮದ್ಯ ತಯಾರಿಕಾ ಕಂಪನಿಗಳಿವೆ.ಪ್ರತಿ ನಿತ್ಯ ಆಯಾ ಕಂಪನಿಗಳು ತಮ್ಮ ಬ್ರ್ಯಾಂಡ್ ಅಡಿ ಮದ್ಯ ತಯಾರಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸಿ ಮದ್ಯ ಮಾರಾಟ ಮಾಡುತ್ತಿವೆ. ಆದರೆ, ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಕೆಲ ತಯಾರಿಕಾ ಕಂಪನಿಗಳು ಸೂಕ್ತವಾಗಿ ಮದ್ಯವನ್ನು ಉತ್ಪಾದಿಸುತ್ತಿಲ್ಲ. ಇದರಿಂದಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಲ್ಲಿ (ಕೆಎಸ್ಬಿಸಿಎಲ್) ಸೂಕ್ತ ಮದ್ಯ ದಾಸ್ತಾನು ಇಲ್ಲದೆ ಮದ್ಯದಂಗಡಿ ಮಾಲೀಕರು ಪರದಾಡುತ್ತಿದ್ದಾರೆ.ಸರ್ಕಾರ ನಿಗದಪಡಿಸಿದ್ದ ಆದಾಯ ಗುರಿ ತಲುಪಲು ಇಲಾಖೆ ಅಧಿಕಾರಿಗಳು ಸಹ ಸಂಕಟ ಪಡುತ್ತಿದ್ದಾರೆ.
ರಾಜ್ಯದಲ್ಲಿ 3,988 ವೈನ್ಶಾಪ್(ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್ಐಎಲ್ (ಸಿಎಲ್11ಸಿ) ಮತ್ತು 745 ಆರ್ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ಪ್ರತಿ ನಿತ್ಯ ಮದ್ಯ ಮಾರಾಟದಿಂದಾಗಿ 65-70 ಕೋಟಿ ರೂ.ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ.
ಪ್ರೀಮಿಯಂ ಮದ್ಯದ ದರ ಇಳಿಸಿ, ಬಿಯರ್ ದರ ಹೆಚ್ಚಿಸಿ ಸರ್ಕಾರ ಆ.26ರಂದು ಅಧಿಸೂಚನೆ ಹೊರಡಿಸಿತ್ತು. ಒಟ್ಟು 18 ಸ್ಲ್ಯಾಬ್ಗಳ ಸಂಖ್ಯೆಯನ್ನು 16ಕ್ಕೆ ಇಳಿಸಲಾಗಿತ್ತು. ಇದರಿಂದಾಗಿ ಮೊದಲ ಮೂರು ಸ್ಲ್ಯಾಬ್ಗಳಲ್ಲಿ ದರ ವ್ಯತ್ಯಸವಾಗಿಲ್ಲ.4ನೇ ಸ್ಲ್ಯಾಬ್ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆಯಾಯಿತು. 5ನೇ ಸ್ಲ್ಯಾಬ್ನಿಂದ 16ನೇ ಸ್ಲ್ಯಾಬ್ವರೆಗೆ ದರ ಕ್ರಮೇಣ ಇಳಿಕೆಯಾಯಿತು. ಹೀಗಾಗಿ, ಪುಲ್ ಬಾಟಲ್ ರಮ್, ವಿಸ್ಕಿ, ಬ್ರಾಂಡಿಗಳ ಮೇಲೆ ಗರಿಷ್ಠ 500-600 ರೂ.ದರ ಇಳಿಕೆಯಾಯಿತು. ಆದರೆ, ತಯಾರಿಕೆ ಸೇರಿ ಇತರೆ ಕಚ್ಛಾವಸ್ತುಗಳ ಬೆಲೆ ಏರಿಕೆಯಿಂದಾಗಿ ಮದ್ಯ ತಯಾರಿಸಲು ಸಾಕಷ್ಟು ಹಣ ವ್ಯಯವಾಗುತ್ತಿದ್ದು, ಮದ್ಯ ತಯಾರಿಸಲು ನಷ್ಟ ಉಂಟಾಗುತ್ತಿದೆ ಎನ್ನುವುದು ಕೆಲ ತಯಾರಿಕಾ ಕಂಪನಿಗಳ ವಾದವಾಗಿದೆ.