

ಚಿಕ್ಕಬಳ್ಳಾಪುರ: ಶ್ರೀ ಮಹರ್ಷಿ ವಾಲ್ಮೀಕಿಯು ಕೊಟ್ಟ ಕೊಡುಗೆ ಮಹಾಕಾವ್ಯ ರಾಮಾಯಣ. ಇದರ ಮೂಲಕ ಆದರ್ಶ ತತ್ವಗಳನ್ನು ಸಾರಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಹಮ್ಮಿಕೊಂಡಿದ್ದ “ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವ”ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ರಾಮಾಯಣ ಹಾಗೂ ಮಹಾಭಾರತಗಳು ಅತ್ಯಂತ ಮಹತ್ವದ ಸ್ಥಾನ ಪಡೆದಿವೆ. ಇವು ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿವೆ ಎಂದರು. ವಾಲ್ಮೀಕಿ ರಚಿಸಿರುವ ರಾಮಾಯಣಕ್ಕೆ ಪುರಾವೆಗಳಿವೆ. ಶ್ರೀಲಂಕಾದಿಂದ ಭಾರತಕ್ಕೆ ಅಂಟಿಕೊಂಡಿರುವ ರಾಮ ಸೇತು ಇರುವಿಕೆಯು ವೈಜ್ಞಾನಿಕ ಸಾಕ್ಷಿಯಾಗಿದೆ ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ವಾಲ್ಮೀಕಿ ಭವನದ ನಿರ್ಮಾಣ ಜವಾಬ್ದಾರಿ ಹೊತ್ತುಕೊಳ್ಳಲಿದ್ದು 4 ಕೋಟಿ ರೂ ಅನುದಾನವನ್ನು ಸರ್ಕಾರದಿಂದ ತಂದು ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಅಪರ ಜಿಲ್ಲಾಧಿಕಾರಿ ಎನ್ ಭಾಸ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎನ್ ಕೇಶವರೆಡ್ಡಿ, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ನಾಗರಾಜ್, ಸಂಪನ್ಮೂಲ ವ್ಯಕ್ತಿ ಎನ್. ಚಂದ್ರ ಶೇಖರ್, ಸಮುದಾಯದ ಮುಖಂಡರಾದ ಸುಬ್ಬರಾಯಪ್ಪ, ನಾರಾಯಣಸ್ವಾಮಿ, ಮುನಿರಾಜು, ಆವಲಕೊಂಡರಾಯಪ್ಪ, ಮೂರ್ತಿ, ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.
*ನಗರದಲ್ಲಿ ಅದ್ಧೂರಿ ಮೆರವಣಿಗೆ*
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ಹೂವಿನ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು. ವಾಪಸಂದ್ರದ ಶ್ರೀ ರಂಗನಾಥ ದೇವಾಲಯದಿಂದ ಆರಂಭಗೊಂಡು, ಬಿ.ಬಿ ರಸ್ತೆ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಒಕ್ಕಲಿಗರ ಕಲ್ಯಾಣ ಮಂಟಪ ಸಮೀಪ ಮೆರವಣಿಗೆಗೆ ತೆರೆ ಎಳೆಯಲಾಯಿತು. ತಮಟೆ ವಾದ್ಯ, ಕರಡಿ ಕುಣಿತ, ಸೋಮನ ಕುಣಿತ ಸೇರಿದಂತೆ ಜಾನಪದ ಹಾಗೂ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆದವು.
*ಸನ್ಮಾನ, ಪುರಸ್ಕಾರ ಕಾರ್ಯಕ್ರಮ*
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನೆಗಳಡಿ ಹೈನುಗಾರಿಕೆ, ಹಸು, ಎಮ್ಮೆ, ಮೊಲ ಸಾಕಾಣಿಕೆ, ಪಾಲಿ ಮನೆ , ಸೌಲಭ್ಯಗಳ ಆದೇಶ ಪತ್ರವನ್ನು ನೀಡಲಾಯಿತು. ವಿವಿಧ ಕ್ಷೇತ್ರಗಳ 9 ಸಾಧಕರನ್ನು ಸನ್ಮಾನಿಸಲಾಯಿತು.