ಹಬ್ಬಗಳಲ್ಲಿದೆ ಶ್ರೀಮಂತ ಸಂಸ್ಕಾರ

2 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಳ್ಳಿಯ ಹಾಡುಗಳಲ್ಲಿ ಆಧುನಿಕತೆ ಬೆರೆಸಿ ಹಾಡುವುದನ್ನ ರೂಢಿಸಿಕೊಳ್ಳಬೇಕಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದ ಕಲಾ ಮಂಟಪವು ಸುವರ್ಣ ಮಹಿಳೆಯರ ಕನಸಿನ ಧಾರವಾಡ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಂಪ್ರದಾಯ ಸೌರಭ ಎಂಬ ಗ್ರಾಮೀಣರ ಹಬ್ಬದ ಹಾಡು&ಪಾಡು ಮತ್ತು ಹಳ್ಳಿಯ ಸೊಗಡಿನಿಂದ ಪ್ಯಾಟಿಯ ಕಡೆಗೆ, ಉಡುಗೆ&ತೊಡುಗೆ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಮಕ್ಕಳಿಗೆ ಹಬ್ಬ, ಸಂಪ್ರದಾಯಗಳ ಕುರಿತು ತಿಳಿಸುವ ಕೆಲಸ ಆಗಬೇಕಿದೆ. ಹಬ್ಬಗಳಲ್ಲಿ ಆಧುನಿಕತೆ ಸೇರಿಸಿ ಆಚರಿಸುವ ಬದಲಾವಣೆಯೂ ಆಗಬೇಕು. ಪ್ರತಿಯೊಂದು ಹಬ್ಬ ಹರಿದಿನಗಳನ್ನು ಎಲ್ಲರೂ ಸೇರಿ ಸಂಭ್ರಮದಿಮದ ಆಚರಿಸುತ್ತಿದ್ದರು. ಆದರೆ ಈಗ ಪಟ್ಟಣಗಳಲ್ಲಿ ಆ ಸಂಸ್ಕಾರ ಕಡಿಮೆಯಾಗುತ್ತಿದ್ದು, ಯುವ ಜನಾಂಗದಲ್ಲಿ ಈ ಕುರಿತ ಜಾಗೃತಿ ಮೂಡಿಸಬೇಕು. ಹಬ್ಬ ಹರಿದಿನಗಳು ವೈಜ್ಞಾನಿಕವಾಗಿ ನಮ್ಮ ಜೀವನದ ಪಾಠಗಳಾಗಿವೆ. ಉತ್ತರ ಕರ್ನಾಟಕದ ಹಬ್ಬ ಹರಿದಿನಗಳಲ್ಲಿ ಶ್ರೀಮಂತವಾದ ಸಂಸ್ಕಾರ ತುಂಬಿದೆ ಎಂದರು.
ಸಂದ ಪ್ರಧಾನ ಕಾರ್ಯದಶಿರ್ ಶಂಕರ ಹಲಗತ್ತಿ ಮಾತನಾಡಿ, ನಾವು ಇಂದು ಬದುಕಬೇಕಾದರೆ ನಿಸರ್ಗ ಕಾಯ್ದುಕೊಳ್ಳಬೇಕಿದೆ. ಹಳೆಯ ಬೇರು ಹೊಸ ಚಿಗುರು ಸೇರಿದಾಗ ಮಾತ್ರ ಬದುಕು ಸುಸೂತ್ರವಾಗಿ ಸಾಗುತ್ತದೆ. ಮಹಿಳೆಯರು ನಮ್ಮ ನಾಡಿನ ನಿಸರ್ಗದ ಕೊಡುಗೆ ತೆರೆದಿಟ್ಟಿದ್ದಾರೆ. ಮುಂದಿನ ಪೀಳಿಗೆ ಅದನ್ನು ಬಳಸಿಕೊಂಡರೆ ಅವರ ಬದುಕು ಎಲ್ಲದರಲ್ಲೂ ಶ್ರೀಮಂತವಾಗಲಿದೆ ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹೊಸಕೇರಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಗಿರಿಜಾ ಹಿರೇಮಠ, ಮಹಾಂತೇಶ ನರೇಗಲ್​, ಗುರು ಕಲ್ಮಠ, ನಾಗಭೂಷಣ ಹಿರೇಮಠ, ಭಾರತಿ ಕಲ್ಮಠ, ಜ್ಯೋತಿ ಭಾವಿಕಟ್ಟಿ, ಸುನಿತಾ ವಾಸರದ, ರಾಜಶೇಖರ ಬಶೆಟ್ಟಿ, ಸುವರ್ಣ ಮುಕ್ತಾಮಠ, ನಂದಾ ಗುಳೇದಗುಡ್ಡ, ಇತರರು ಇದ್ದರು.
ಪ್ರಭಾ ನೀರಲಗಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಷಯಾ ಜೇವೂರ ನಿರೂಪಿಸಿದರು. ಆಶಾ ಸೈಯದ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net