ಸರ್ಕಾರಿ ಶಾಲೆಗಳಲ್ಲೂ ಇದೆ ಗುಣಮಟ್ಟದ ಶಿಕ್ಷಣ

09 CRP-1A
ಚನ್ನರಾಯಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಅನಾವರಣಗೊಳಿಸಿದರು.
Published on

ಚನ್ನರಾಯಪಟ್ಟಣ: ಸರ್ಕಾರಿ ಶಾಲೆಗಳಲ್ಲಿ ಸಿಗುವ ಸವಲತ್ತು ಹಾಗೂ ಗುಣಮಟ್ಟದ ಶಿಕ್ಷಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಚನ್ನರಾಯಪಟ್ಟಣ ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಮಹೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ಸೌಲಭ್ಯಗಳು ಬೇಕು ಆದರೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳು ಕಲಿಯುವುದು ಬೇಡ. ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯ ಸಿಗುತ್ತಿದ್ದರೂ ಪಾಲಕರಿಗೆ ಖಾಸಗಿ ಶಾಲೆಗಳ ವ್ಯಾಮೋಹ ಹೆಚ್ಚಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ಜಾರಿಗೊಳಿಸುವ ಎಲ್ಲ ಸವಲತ್ತು ಕಲ್ಪಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲ ವರ್ಗಕ್ಕೆ ಸೇರಿದ ಮಕ್ಕಳು ಇದ್ದು, ಪ್ರತಿಯೊಂದು ಮಗುವಿನಲ್ಲೂ ವಿಭಿನ್ನ ಆಲೋಚನೆ ಹಾಗೂ ಆವಿಷ್ಕಾರ ಕೈಗೊಳ್ಳುವ ಹುರುಪು ಇರುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನೀಡುವ ಗುಣಮಟ್ಟದ ಶಿಕ್ಷಣ, ಸರ್ಕಾರಿ ಶಾಲೆಯಲ್ಲೇ ಸಿಗುತ್ತದೆ. ಪಟ್ಟಣಕ್ಕೆ ಸೀಮಿತವಾಗಿದ್ದ ಖಾಸಗಿ ಶಾಲೆಗಳ ವ್ಯಾಮೋಹ, ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿ ಪಾಲಕರು ಅಂಕದ ಹಿಂದೆ ಓಡುವ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಅಂಕದೊಂದಿಗೆ ಮಗುವಿನಲ್ಲಿ ಸರ್ವತೋಮುಖ ಅಭಿವೃದ್ಧಿ, ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರಿ ಶಾಲೆ ಸಮಗ್ರ ಶಿಕ್ಷಣದೊಂದಿಗೆ ಮಾನಸಿಕವಾಗಿ ಮಕ್ಕಳನ್ನು ಬೆಳೆಸುತ್ತಿದೆ ಎಂಬುದನ್ನು ಪಾಲಕರಿಗೆ ಮನದಟ್ಟು ಮಾಡಬೇಕು ಎಂದರು.

ಓದುಗರಲ್ಲಿ ಕ್ರಿಯಾಶೀಲತೆ ಉಂಟು ಮಾಡುವ, ದೈನಂದಿನ ವಿಚಾರಗಳನ್ನು ತಿಳಿಸುವ ಪತ್ರಿಕೆಯಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಹೆಚ್ಚು ಜ್ಞಾನ ಪಡೆಯಬಹುದಾಗಿದೆ. ದೂರದರ್ಶನ, ಸಾಮಾಜಿಕ ಜಾಲತಾಣಗಳು ನಮಗೆ ಮಾಹಿತಿ ನೀಡಬಹುದಷ್ಟೆ. ಆದರೆ ಪತ್ರಿಕೆಗಳು ಓದುವುದರಿಂದ ಪ್ರಪಂಚದ ಆಗುಹೋಗುಗಳು ನಮ್ಮ ಸ್ಮತಿಪಟಲದಲ್ಲಿ ಮುದ್ರೆ ಹಾಕಿದಂತೆ ಉಳಿಯುತ್ತವೆ. ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಪ್ರಚಲಿತ ವಿದ್ಯಮಾನ, ರಾಜಕೀಯ, ಶಿಕ್ಷಣ, ಕ್ರೀಡೆ, ಆರ್ಥಿಕ ವ್ಯವಹಾರ, ದೇಶ ವಿದೇಶಗಳ ಸಮಗ್ರ ಮಾಹಿತಿ, ಸಂಪಾದಕೀಯ, ವಿಮರ್ಶೆ ಲಭ್ಯವಿರುತ್ತದೆ. ಇನ್ನು ಸ್ಥಳೀಯ ಸಮಸ್ಯೆಗಳು, ಸಾಧನೆ-ಸಾಧಕರು, ವಿಜ್ಞಾನ-ಪರಿಸರಕ್ಕೆ ಪೂರಕವಾದ ವಿಶೇಷ ಲೇಖನಗಳನ್ನು ಗಮನಿಸಬಹುದು. ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಲ್ಲಿ ಭಾಷೆಯ ಮೇಲಿನ ಹಿಡಿತದೊಂದಿಗೆ ವಿದ್ಯಾರ್ಥಿಯ ಜ್ಞಾನಭಂಡಾರವೂ ವೃದ್ಧಿಸಿಕೊಳ್ಳಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಬಿ.ಆರ್.ರಮೇಶ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರಸ್ಪರ ಸ್ನೇಹ ಸೌಹಾರ್ದದಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು. ಮುಂದಿನ ಉತ್ತಮ ಸಾಮಾಜಿಕ ವ್ಯವಸ್ಥೆ ಮತ್ತು ಭವಿಷ್ಯ ನಿರ್ಮಾಣಕ್ಕಾಗಿ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಪಠ್ಯೇತರ ಚಟುವಟಿಕೆಗಳ ಜತೆಗೆ ಸಮಾಜದ ನೋವುಗಳಿಗೆ ಸ್ಪಂದಿಸುವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಯಶಸ್ಸಿಗೆ ಯಾವುದೇ ಅಡ್ಡದಾರಿ ಇರುವುದಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಿಂಜರಿಕೆ ಮನೋಭಾವ ತೊಡೆದು ಹಾಕಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಮೂಲಕ ಉತ್ತಮ ಅಂಕ ಗಳಿಸಿ ತಂದೆ-ತಾಯಿ, ಊರಿಗೆ ಕೀರ್ತಿ ತರಬೇಕು. ವಿಜಯವಾಣಿ ಹೊರ ತರುತ್ತಿರುವ ಮಿನಿ ಸಂಚಿಕೆ ವಿದ್ಯಾರ್ಥಿ ಮಿತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪೂರಕವಾದ ಮಾಹಿತಿಯಲ್ಲದೆ ಪ್ರಚಲಿತ ವಿದ್ಯಮಾನಗಳು, ಮಹಿಳೆಯರ ಸಬಲೀಕರಣ, ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಣಜವನ್ನೇ ಹೊಂದಿದೆ. ಸಂಚಿಕೆಯನ್ನು ಎಲ್ಲರೂ ತಪ್ಪದೆ ಓದಬೇಕು ಎಂದ ತಿಳಿಸಿದರು.

ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಲಯನ್ ಸೇವಾ ಸಂಸ್ಥೆ ಶಾಲೆಯ ಪಠ್ಯೇತರ ಚಟುವಟಿಗಳಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಪದಾಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net