ಕರಾವಳಿ ಜನರಲ್ಲಿದೆ ಬಹುತ್ವ ಸಮ್ಮಿಲನ

h1-Karavali Utsav
Published on

ಹುಬ್ಬಳ್ಳಿ: ಸಮುದ್ರ ತೀರಕ್ಕೆ ಹೊಂದಿಕೊಂಡಿರುವಂಥ ಕರಾವಳಿ ಪ್ರದೇಶದಲ್ಲಿ ಸಂಸ್ಕೃತಿ, ಕಲೆ, ಸಾಹಿತ್ಯ ಸೇರಿದಂತೆ ಬಹುತ್ವವಿದೆ. ಇಂಥ ಸಮ್ಮಿಲನ 320 ಕಿ.ಮೀ. ವ್ಯಾಪ್ತಿ ತುಂಬ ಹರಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಹಾಗೂ ಇನ್ನರ್‌ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಸಹಯೋಗದಲ್ಲಿ ಇಲ್ಲಿಯ ಕಲ್ಲೂರ ಲೇಔಟ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಕರಾವಳಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿ ನಾಡಿನಲ್ಲಿ ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆಗಳು, ಬುದ್ಧಿಮತ್ತೆ, ಪತ್ರಿಕೆ, ಚಲನಚಿತ್ರ, ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ. ಇಂಥ ನಾಡಿನಲ್ಲಿ ದೇಶದ್ರೋಹ ಚಟುವಟಿಕೆಗೆ ಯಾರೂ ಆಸ್ಪದ ಕೊಡದೇ ಜಾಗೃತರಾಗಬೇಕು. ಸಮುದ್ರ ತೀರ ಇರುವುದರಿಂದ ದೇಶದ್ರೋಹ ಚಟುವಟಿಕೆ ನಡೆಸುವ ಗುಂಪು ಜನಿಸಿದೆ. ಸರ್ಕಾರಕ್ಕೂ ಮಾಹಿತಿ ಕೊಡಬೇಕು. ಇಂಥವರನ್ನು ಸರ್ಕಾರ ಶಿಕ್ಷಿಸದೇ ಬಿಡುವುದಿಲ್ಲ ಎಂದರು.

ಭೂಲೋಕದ ಸ್ವರ್ಗ ಎನಿಸಿಕೊಂಡಿರುವ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆದಿದೆ. ಕಳೆದ 10 ವರ್ಷದಿಂದಲೂ ಮಟ್ಟ ಹಾಕಲಾಗಿದೆ. ದೇಶಪ್ರೇಮಿಗಳು ಹಾಗೂ ಸಮಾಜಪ್ರೇಮಿಗಳಾದ ಕರಾವಳಿ ಜನರು ಜಾಗೃತರಾಗಿ ಇಂಥವರನ್ನು ಸದೆಬಡೆಯಲು ಕೈಜೋಡಿಸಬೇಕು ಎಂದು ವಿನಂತಿಸಿದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಕರಾವಳಿ ಜನರು ಸಿಗುತ್ತೀರಿ. ಪ್ರಾಮಾಣಿಕವಾಗಿ ಕೆಲಸ ಮಾಡುವ ಜನರಾದ ಕರಾವಳಿಯವರು ಶ್ರಮಜೀವಿಗಳೂ ಹೌದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಎಲ್ಲ ಸಮಾಜದವರೊಂದಿಗೆ ಕರಾವಳಿ ಜನರು ಬೆರೆಯುತ್ತಾರೆ. ಪ್ರೀತಿ, ವಿಶ್ವಾಸವನ್ನು ಗಳಿಸುತ್ತಾರೆ. ಹೋಟೆಲ್, ರಿಯಲ್ ಎಸ್ಟೇಟ್, ಚಿನ್ನದೋದ್ಯಮ, ಸಣ್ಣ ಕೈಗಾರಿಕೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ನಮ್ಮ ದೇಶ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ನಾವಾಗಲಿ, ಬಿಜೆಪಿಯವರಾಗಲಿ ಯಾರೂ ಮನೆಯಿಂದ ಹಣ ತಂದು ಕೊಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಬೇಕು. ವ್ಯವಸ್ಥೆಯಲ್ಲಿ ಬದಲಾವಣೆ ಕಾಣಬೇಕಾದರೆ ಪ್ರಬಲ ಸಮುದಾಯದವರು ಧ್ವನಿ ಎತ್ತುವಂತಾಗಬೇಕು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಕರಾವಳಿ ಉತ್ಸವ ಆಯೋಜನೆಯಾಗಿದೆ. ಇಷ್ಟು ದಿನಗಳವರೆಗೆ ಉತ್ತರ ಕರ್ನಾಟಕದ ತಿನಿಸು ಸವಿದಿದ್ದೇವೆ. ಇದೇ ರೀತಿ ಕರಾವಳಿ ಭಾಗದ ತಿನಿಸುಗಳನ್ನೂ ಸವಿಯಬಹುದು. ಇದರಿಂದ ಬೇರೆ ಪ್ರದೇಶದ ಊಟ, ಸಂಸ್ಕೃತಿ ತಿಳಿಯಲು ಅನುಕೂಲವಾಗಲಿದೆ ಎಂದರು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಇನ್ನರ್‌ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಪ್ರಮುಖರಾದ ಪ್ರವೀಣ ಬನ್ಸಾಲಿ, ನಾಗರಾಜ ನಾಯ್ಕ, ಅನಂತಪದ್ಮನಾಭ ಐತಾಳ, ಶಶಿಮಂಗಳಾ ಐತಾಳ, ಅಣ್ಣಪ್ಪ ಮರಕಲೆ, ವಿವೇಕ ಪೂಜಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net