ಧಾರವಾಡ ಹಳೇ ಎಪಿಎಂಸಿಯಲ್ಲಿ ಬರೀ ಕೊಳೆ!

27 Jaggu 4
Published on

ಧಾರವಾಡ: ನಿರ್ವಹಣೆ ಕೊರತೆಯಿಂದ ನಗರದ ಸವದತ್ತಿ ರಸ್ತೆಯಲ್ಲಿರುವ ಹಳೇ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರದೇಶ ಕೊಳಚೆ ತಾಣವಾಗಿ ಮಾರ್ಪಟ್ಟಿದೆ.

ಎಪಿಎಂಸಿ ಆವರಣ ಕೆಸರುಮಯವಾಗಿದ್ದು, ಹಂದಿ, ನಾಯಿಗಳ ಅಡ್ಡೆಯಾಗಿದೆ. ಗಬ್ಬು ವಾಸನೆ, ಸೊಳ್ಳೆಗಳ ಕಾಟದಿಂದ ಸುತ್ತಲಿನ ಅಂಗಡಿಕಾರರು ಬೇಸತ್ತಿದ್ದಾರೆ. 2014ರಿಂದಲೇ ಇಲ್ಲಿಂದ ಎಪಿಎಂಸಿ ಸ್ಥಳಾಂತರವಾಗಿದ್ದು, ಮುರುಘಾಮಠದ ಬಳಿ ಹೊಸದಾಗಿ ಸ್ಥಾಪಿಸಲಾಗಿದೆ. ಆದರೆ, 11 ವರ್ಷಗಳಿಂದ ಹಳೇ ಎಪಿಎಂಸಿ ಪ್ರದೇಶವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಧಾರವಾಡ ಎಪಿಎಂಸಿ ಅಧಿಕಾರಿಗಳ ನಿಷ್ಕಾಳಜಿಯಿಂದ ಕೊಳಚೆ ಪ್ರದೇಶವಾಗಿ ಪರಿವರ್ತನೆಯಾಗಿದೆ.

ಹಳೇ ಎಪಿಎಂಸಿಯಲ್ಲಿನ ಮಳಿಗೆಗಳನ್ನು ಈ ಹಿಂದೆಯೇ ವರ್ತಕರಿಗೆ ‘ಲೀಸ್ ಕಂ ಸೇಲ್’ ಆಧಾರದ ಮೇಲೆ ನೀಡಲಾಗಿದೆ. ಲೈಸೆನ್ಸ್ (ಪರವಾನಗಿ) ಹೊಂದಿರುವ ಹಲವು ವರ್ತಕರಿಗೆ 10 ವರ್ಷಗಳ ಲೀಸ್ ಅವಧಿ ಮುಗಿದ ಬಳಿಕ ಇದೇ ವರ್ತಕರಿಗೆ ಮಾರಾಟ ಮಾಡಲಾಗಿದೆ. ಇವರು ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಿ, ಹೊಸ ಎಪಿಎಂಸಿಗೆ ಸ್ಥಳಾಂತರಗೊಂಡಿದ್ದಾರೆ. ಆದರೆ, ವರ್ತಕರ ಅಂಗಡಿಗಳು ಯಾವುದೇ ರೀತಿ ಅಭಿವೃದ್ಧಿ ಕಂಡಿಲ್ಲ. ಜತೆಗೆ ಎಪಿಎಂಸಿ ಸುಪರ್ದಿಗಿರುವ 20 ಗುಂಟೆಯ ಆಫೀಸ್ ಕಟ್ಟಡ, 7 ಗುಂಟೆ ವ್ಯಾಪ್ತಿಯ ಟೆಂಡರ್ ಹಾಲ್, 10 ಗುಂಟೆ ಪ್ರದೇಶದಲ್ಲಿರುವ ರೈತರ ಕಟ್ಟಡ ಹಾಗೂ ರಸ್ತೆಯುದ್ದಕ್ಕೂ ಇರುವ 60 ಅಂಗಡಿಗಳು ಶಿಥಿಲಾವಸ್ಥೆ ತಲುಪಿವೆ. ಸುತ್ತಲೂ ಗಲೀಜಾಗಿದ್ದು, ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ.

ಡಿನೋಟಿಫೈ ಮಾಡಿದರೆ ಅಭಿವೃದ್ಧಿ

ಹಳೇ ಎಪಿಎಂಸಿ ಅವರ ಸುಪರ್ದಿಯಲ್ಲಿರುವ ಜಾಗವನ್ನು ಹು-ಧಾ ಮಹಾನಗರ ಪಾಲಿಕೆಯು ‘ಡಿನೋಟಿಫೈ’ ಮಾಡಿದರೆ ಈ ಪ್ರದೇಶವು ಪಾಲಿಕೆ ಸುಪರ್ದಿಗೆ ಬರುತ್ತದೆ. ಅಲ್ಲಿ ನಿಯಮಿತವಾಗಿ ಸ್ವಚ್ಛತೆ ಕೆಲಸ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು. ಆದರೆ, ಪಾಲಿಕೆ ಅಧಿಕಾರಿಗಳಾಗಲಿ, ಎಪಿಎಂಸಿ ಅಧಿಕಾರಿಗಳಾಗಲಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ವರ್ತಕರು ಆರೋಪಿಸುತ್ತಿದ್ದಾರೆ. ಪಾಲಿಕೆಗೆ ಮೇಲಿಂದ ಮೇಲೆ ಪತ್ರ ವ್ಯವಹಾರ ಮಾಡಿದರೂ ಡಿನೋಟಿಫೈ ಮಾಡುವುದಕ್ಕಾಗಲಿ ಅಥವಾ ಸುಧಾರಣಾ ಕಾರ್ಯ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಆರೋಪಿಸಿದ್ದಾರೆ. ಎರಡೂ ಕಡೆಯ ಅಧಿಕಾರಿಗಳ ಸಬೂಬುಗಳಿಂದ ಸ್ಥಳೀಯರಿಗೆ ಹಾಗೂ ಸಾರ್ವಜನಿಕರಿಗೆ ಗಬ್ಬು ನಾರುವ ಹಳೇ ಎಪಿಎಂಸಿ ಆವರಣದಿಂದ ತೊಂದರೆಗಳಾಗುತ್ತಿವೆ. ಸಮಸ್ಯೆಗೆಂದು ಮುಕ್ತಿ ಎಂದು ಪ್ರಶ್ನಿಸುತ್ತಿದ್ದಾರೆ.

ಹಳೇ ಎಪಿಎಂಸಿ, ಹೊಸ ಎಪಿಎಂಸಿ ಸುಧಾರಣೆ ಹಾಗೂ ಮಾಳಾಪುರದಲ್ಲಿ ಜಾನುವಾರು ಮಾರುಕಟ್ಟೆ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ನೀಡುವಂತೆ ಶಾಸಕರು 6 ತಿಂಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದೆ. ಜತೆಗೆ ಪಾಲಿಕೆ ಅಧಿಕಾರಿಗಳೊಂದಿಗೆ ಮಾತನಾಡಿ ಹಳೇ ಎಪಿಎಂಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ. ಎ.ಪಿ. ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಧಾರವಾಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net