ಮೂರು ಡಿಸಿಎಂ ಮಾಡಿದ್ರೆ ತಪ್ಪೇನಿಲ್ಲ

NS Bosaraju
Published on

ರಾಯಚೂರು: ರಾಜ್ಯದಲ್ಲಿ ಮೂವರು ಉಪ ಮುಖ್ಯಮಂತ್ರಿಗಳನ್ನು ಮಾಡಿದರೆ ತಪ್ಪೇನಿಲ್ಲ. ಅನೇಕ ರಾಜ್ಯಗಳಲ್ಲಿ ಮೂರು ಡಿಸಿಎಂಗಳಿದ್ದಾರೆ. ಮಾಡಿದರೂ ನಡೆಯುತ್ತೆ, ಮಾಡದಿದ್ದರೂ ನಡೆಯುತ್ತದೆ. ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಸಂಜೆ ಮಾತನಾಡಿ, ಪಕ್ಷದ ಮುಖಂಡರು ಅವರವರ ಅಭಿಪ್ರಾಯಗಳನ್ನು ಹೇಳುತ್ತಾರೆ. ಸಭೆ, ಸಮಾರಂಭಗಳಲ್ಲಿ ಮಾತನಾಡುತ್ತಾರೆ. ಆದರೆ ಏನೇ ಮಾಡಬೇಕಾದರೂ ಸಿಎಂ ಮತ್ತು ಪಕ್ಷದ ಅಧ್ಯಕ್ಷರ ಗಮನಕ್ಕೆ ತಂದು ಹೈಕಮಾಂಡ್ ಮುಂದೆ ಹೋಗಬೇಕು ಎಂದರು.
ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಒಂದು ರಾಜ್ಯದಲ್ಲಿ ಒಂದು, ಇನ್ನೊಂದು ರಾಜ್ಯದಲ್ಲಿ ಮತ್ತೊಂದು ಪಾಲಸಿ ಮಾಡೋಲ್ಲ. ಎಲ್ಲಡೆ ಒಂದೇ ಪಾಲಸಿ ಇರುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ. ಪಕ್ಷಕ್ಕೆ ಯಾವುದು ಒಳ್ಳೆಯದು ಎಂದು ಪಕ್ಷದ ನಾಯಕರು ಸೇರಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಎನ್.ಎಸ್.ಬೋಸರಾಜು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net