ಸಂಸ್ಕೃತಿ ಕಲಿಯದ ಮಕ್ಕಳಿಂದ ತಪ್ಪಿದ್ದಲ್ಲ ಕಂಟಕ

SRISHAILA SREE
Published on

ದಾಂಡೇಲಿ: ಸಂಸ್ಕೃತಿ ಕಲಿಯದ ಮಕ್ಕಳು ಮುಂದೊಂದು ದಿನ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಾಧ್ಯತೆ ಹೆಚ್ಚು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾದರು ಹೇಳಿದರು.

ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ಆಶೀರ್ವಚನ ನೀಡಿದರು. ಧರ್ಮದ ಹಾದಿಯಲ್ಲಿ ಪೂಜೆ, ಪುನಸ್ಕಾರ, ಭಕ್ತಿಯಿಂದ ಬಾಳಲು ಪಾಲಕರು ಮೊದಲು ಮಕ್ಕಳಿಗೆ ಉತ್ತಮ ಸಂಸ್ಕೃತಿ ಕಲಿಸಬೇಕು. ಆ ಮೂಲಕ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡಲು ಯತ್ನಿಸಬೇಕು ಎಂದರು.

ಭಗವಂತ ನೀಡಿದ ಕೈಗಳನ್ನು ಕೇವಲ ಆಭರಣಗಳಿಗೆ ಬಳಸಿದರೆ ಒಳಿತಲ್ಲ. ದಾನಕ್ಕಾಗಿ ಬಳಸಬೇಕು. ಕುತ್ತಿಗೆಯ ಕಂಠದಿಂದ ಸತ್ಯದ ಮಾತುಗಳು ಬರಬೇಕು. ಕಿವಿಗಳನ್ನು ಸಾಧು ಸಂತರ ಹಿತವಚನ ಕೇಳಲು ಬಳಸಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಸೆ.27ರವರೆಗೆ ಜೊಯಿಡಾ ತಾಲೂಕಿನ ಕಳಸಾ ಗ್ರಾಮದ ಶಾಖಾ ಮಠದಲ್ಲಿ ವಾಸ್ತವ್ಯ ಹೂಡಿ ಮಠದ ಅಭಿವೃದ್ಧಿಗೆ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣಕ್ಕೆ ಹಳಿಯಾಳ-ದಾಂಡೇಲಿ-ಜೊಯಿಡಾ ತಾಲೂಕಿನ ಭಕ್ತರೊಂದಿಗೆ ವಿಚಾರ ವಿನಿಮಯ ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದರು.
ಇದಕ್ಕೂ ಮುನ್ನ ಜಗದ್ಗುರುಗಳು ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ನಂತರ ವೀರಭದ್ರೇಶ್ವರ ದೇವಸ್ಥಾನದವರೆಗೆ ಕುಂಭಮೇಳ ಹಾಗೂ ವಾದ್ಯದೊಂದಿಗೆ ಸ್ವಾಮೀಜಿಯವರನ್ನು ಮೆರವಣಿಗೆಲ್ಲಿ ಕರೆತರಲಾಯಿತು.

ಅಂಬಿಕಾನಗರದ ಶ್ರೀಶೈಲ ಶಾಖಾ ಮಠದ ಶ್ರೀ ಈಶ್ವರ ಪಡಿತಾರಾಧ್ಯ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ಯಶಸ್ವಿಗೆ ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಸಂಸ್ಥೆಗಳು, ಅಕ್ಕನ ಬಳಗ ಸಹಕರಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net