ಜಂಬೂಸವಾರಿಯಲ್ಲಿ ಕೇರಳಂ, ತೆಲಂಗಾಣ ಸಿಎಂಗಳಿಗೆ ಪುಷ್ಪಾರ್ಚನೆಗೆ ಅವಕಾಶ ನೀಡಿದ್ದು ತಪ್ಪೇನಿಲ್ಲ : ಸಂಸದ ಯದುವೀರ್

yaduveer
ಸಂಸದ ಯದುವೀರ್
Published on: 

ಮೈಸೂರು: ಜಂಬೂಸವಾರಿ ಪುಷ್ಪಾರ್ಚನೆಗೆ ಕೇರಳಂ ಮತ್ತು ತೆಲಂಗಾಣ ಮುಖ್ಯಮಂತ್ರಿ ಅವರಿಗೆ ಅವಕಾಶ ನೀಡಿರುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಮೈಸೂರು ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಚಾಮುಂಡಿಬೆಟ್ಟದಲ್ಲಿ ಶನಿವಾರ ಮಾಧ್ಯಮ ಪ್ರತಿನಧಿಗಳೊಂದಿಗೆ ಮಾತನಾಡಿದ ಅವರು, ಕೇರಳಂ ಮತ್ತು ತೆಲಂಗಾಣ ಮುಖ್ಯಮಂತ್ರಿ ಅವರನ್ನು ಅತಿಥಿಗಳಾಗಿ ದಸರಾ ಉತ್ಸವಕ್ಕೆ ಆಹ್ವಾನಿಸಲಾಗಿತ್ತು. ಅತಿಥಿಯಾಗಿ ಕರೆ ನಂತರ ಪುಷ್ಪಾರ್ಚನೆಗೆ ಕರೆಯದಿದ್ದರೆ ತಪ್ಪಾಗುತ್ತದೆ. ಅವರನ್ನು ಬಿಟ್ಟು ಉಳಿದವರು ಪುಷ್ಪಾರ್ಚನೆ ಮಾಡಿರುವುದರ ಕುರಿತು ಸರ್ಕಾರ ಸ್ಪಷ್ಟನೆ ನೀಡಲಿ. ಈ ವಿಚಾರದಲ್ಲಿ ನಾನು ಏನೇ ಮಾತನಾಡಿದರೂ ಅದು ಅದು ರಾಜಕೀಯ ಆಗುತ್ತದೆ, ಹಾಗಾಗಿ ಹೆಚ್ಚು ಮಾತನಾಡುವುದಿಲ್ಲ ಎಂದರು.

ದಸರಾ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಪುಷ್ಪಾರ್ಚನೆ ಮತ್ತು ನಂದಿ ಧ್ವಜ ಪೂಜೆಯ ಸಂದರ್ಭ ಕಡಿಮೆ ಜನ ಇದ್ದಷ್ಟು ಒಳ್ಳೆಯದ್ದು. ಮುಖ್ಯಮಂತ್ರಿ ಜತೆ ಒಂದಿಬ್ಬರು ಇದ್ದರೆ ಸಾಕು. ಎಲ್ಲರೂ ಯಾಕೆ ಅಲ್ಲಿಗೆ ಹೋಗಬೇಕು? ಎಲ್ಲ ವಿಧಿವಿಧಾನಕ್ಕೂ ನಿಯಮಗಳು ಇರಬೇಕು. ನಂದಿಧ್ವಜ ಪೂಜೆ ಮತ್ತು ಅಂಬಾರಿ ಪುಷ್ಪಾರ್ಚನೆಗೆ ಸರ್ಕಾರ ಶಿಷ್ಟಾಚಾರ ರೂಪಿಸಲಿ ಎಂದು ಹೇಳಿದರು.

ಈ ಬಾರಿ ದಸರಾದಲ್ಲಿ ಕೆಲವು ಕಾರ್ಯಕ್ರಮಗಳು ಸುಧಾರಣೆ ಆಗಿವೆ, ಮತ್ತಷ್ಟು ಕಾರ್ಯಕ್ರಮಗಳು ಸುಧಾರಣೆ ಕಾಣಬೇಕಿದೆ. ಮುಂದಿನ ದಸರಾದಲ್ಲಿ ಅದರ ಕುರಿತು ಗಮನಹರಿಸಬೇಕಿದೆ. ಈ ಸಂದರ್ಭಕ್ಕೆ ಯಾರ ಮೇಲೂ ಆರೋಪ ಮಾಡುವುದು ಸರಿಯಲ್ಲ ನಾನು ಸರಿಯಾದ ವೇದಿಕೆಯಲ್ಲಿ ಅದರ ಬಗ್ಗೆ ಮಾತನಾಡುತ್ತೇನೆ. ವಿಶ್ವದ ಯಾವುದೇ ಭಾಗದಲ್ಲೂ ದೊಡ್ಡ ಉತ್ಸವಗಳು ನಡೆದಾಗ ಅದು ಪರ್ಫೆಕ್ಟ್ ಆಗಿ ನಡೆಯುವುದಿಲ್ಲ, ಪ್ರತಿವರ್ಷವೂ ಸಣ್ಣ ಪುಟ್ಟ ಲೋಪ ಆಗುತ್ತವೆ. ಆಗುವ ಲೋಪಗಳಿಂದ ಕಲಿಯಲು ಸಾಕಷ್ಟು ಅವಕಾಶಗಳಿವೆ. ಆಗಿರುವ ಪ್ರಮಾದ ಸರಿಪಡಿಸಿಕೊಂಡು ಮುಂದೆ ಸಾಗಬೇಕಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net