ಜ್ಞಾನಕ್ಕೆ ಸಮಾನವಾದ ವಸ್ತು ಬೇರೊಂದಿಲ್ಲ

NAREGAL
Published on

ನರೇಗಲ್ಲ: ಈ ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನವಾದ ವಸ್ತು ಬೇರೊಂದಿಲ್ಲ. ಈ ಜ್ಞಾನವು ಮನುಷ್ಯನಿಗೆ ಪುಸ್ತಕಗಳನ್ನು ಓದುವ ಮೂಲಕ ಬರುತ್ತದೆ. ಆದ್ದರಿಂದ ಟಿವಿ, ಮೊಬೈಲ್‌ಗಳನ್ನು ದೂರ ಸರಿಸಿ ಎಲ್ಲರೂ ಪುಸ್ತಕಗಳಿಗೆ ಶರಣು ಹೋಗಬೇಕು ಎಂದು ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಶ್ರೀಗಳು ಹೇಳಿದರು.

ಸಮೀಪದ ನಿಡಗುಂದಿಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆೆ ಜರುಗಿದ ‘ಶಿವಾನುಭವ ಸಂಪದ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಅದಕ್ಕೆ ಗ್ರಂಥಗಳೇ ಉತ್ತಮ ಸಂಗಾತಿಗಳು. ಉತ್ತಮ ಪುಸ್ತಕಗಳನ್ನು ಓದಿ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೋಟುಮಚಗಿಯ ಗ್ರಂಥಪಾಲಕ ಸುರೇಶ ಪತ್ತಾರ, ಗ್ರಂಥಾಲಯವು ಎಲ್ಲ ವಿಷಯಗಳ ತಾಯಿಯಾಗಿದೆ. ಓದುಗನಿಗೆ ವಾಚನಾಲಯವೇ ವೈಕುಂಠವಾಗಿದೆ. ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳು ಕೂಡ ಗ್ರಂಥಾಲಯಕ್ಕೆ ಹೋಗಿ ಓದಲು ಪ್ರೇರೇಪಿಸಬೇಕು. ಮನೆಯಲ್ಲಿ ಹಿರಿಯರು ಮೊದಲು ಪುಸ್ತಕಗಳನ್ನು ಕೈಗೆತ್ತಿಕೊಂಡು ಓದತೊಡಗಿದರೆ ಮಕ್ಕಳೂ ಅದನ್ನು ಅನುಸರಿಸುತ್ತಾರೆ. ಇಂತಹ ಸಂಸ್ಕಾರವನ್ನು ಈಗಿನಿಂದಲೆ ನೀಡಬೇಕು ಎಂದರು.

ನಿಡಗುಂದಿಯ ಧರ್ಮರ ಮಠದ ಷಣ್ಮುಖಪ್ಪಜ್ಜನವರು ಸಮ್ಮುಖ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಕ್ಕಮಹಾದೇವಿ ಮಹಿಳಾ ವೇದಿಕೆಯವರು ಪ್ರಾರ್ಥನೆ ಮತ್ತು ಕುಮಾರೇಶ್ವರ ನಾಮಾವಳಿ ಹೇಳಿದರು. ಬಸವರಾಜ ಜಂಗಣ್ಣವರ, ಶರಣಪ್ಪ ಅರಮನಿ ಸಂಗಿತ ಸೇವೆ ನೀಡಿದರು. ಶಿಕ್ಷಕ ಡಿ.ಎಸ್. ಬಡಿಗೇರ ನಿರೂಪಿಸಿದರು. ಎ.ಎಸ್. ಗೆದಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net