ಜನಸಂಖ್ಯೆಯ ಅಗತ್ಯಕ್ಕೆ ತಕ್ಕಷ್ಟು ಜೀವಜಲವಿಲ್ಲ : ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ವಿಷಾದ

9
Published on

ಮೈಸೂರು: ಜನಸಂಖ್ಯೆ ಹೆಚ್ಚಳವಾದಂತೆ ಅಗತ್ಯಕ್ಕೆ ತಕ್ಕಂತೆ ಜೀವಜಲದ ಕೊರತೆಯೂ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಸೂಕ್ತವಾಗಿ ಎದುರಿಸಬೇಕಾದರೆ ಅಂತರ್ಜಲ ವ್ಯವಸ್ಥೆಯ ಸಮರ್ಪಕ ನಿರ್ವಹಣೆಯೊಂದೇ ಮಾರ್ಗ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗ, ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಕೇಂದ್ರೀಯ ಅಂತರ್ಜಲ ಮಂಡಳಿದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ‘ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣಾ ಅಭ್ಯಾಸ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪರಿಸರ ರಕ್ಷಣೆಯಿಂದ ಭೂಮಿಯಲ್ಲಿ ವಾಸ ಮಾಡುವ ಜನರ ಆರೋಗ್ಯ ರಕ್ಷಣೆಯೂ ಆಗಲಿದೆ. ಜನಸಂಖ್ಯೆ ಹೆಚ್ಚಳವಾದಂತೆ ಅಗತ್ಯಕ್ಕೆ ತಕ್ಕಂತೆ ಜೀವಜಲದ ಕೊರತೆಯೂ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಸೂಕ್ತವಾಗಿ ಎದುರಿಸಬೇಕಾದರೆ ಅಂತರ್ಜಲ ವ್ಯವಸ್ಥೆಯ ಸಮರ್ಪಕ ನಿರ್ವಹಣೆಯೊಂದೇ ಮಾರ್ಗ ಎಂದರು.

ಅಂತರ್ಜಲ ವ್ಯವಸ್ಥೆಯ ವಿಷಯವಾಗಿ ಪ್ರಸ್ತುತ ವಿದ್ಯಾರ್ಥಿ ಸಮೂಹದಲ್ಲಿ ಆಳವಾದ ಜ್ಞಾನವಿದೆ. ಆದ್ದರಿಂದ ಯುವ ಮುಂದಾಳುಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಕೇಂದ್ರೀಯ ಅಂತರ್ಜಲ ಮಂಡಳಿ ಪ್ರಾದೇಶಿಕ ನಿರ್ದೇಶಕ ಎನ್.ಜ್ಯೋತಿ ಕುಮಾರ್ ಮಾತನಾಡಿ, ಕೇವಲ ಸರ್ಕಾರಿ ಅಧಿಕಾರಿಗಳು, ವಿಷಯ ತಜ್ಞರಿಂದ ಅಂತರ್ಜಲ ರಕ್ಷಣೆ ಹಾಗೂ ನಿರ್ವಹಣೆ ಅಸಾಧ್ಯ. ಇದಕ್ಕೆ ಜನರ ಸಹಕಾರವೂ ಬೇಕು ಎಂದು ಕೋರಿದರು.

ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಕ್ಷೇತ್ರಕ್ಕೆ ಹೆಚ್ಚಿನ ಅಂತರ್ಜಲ ಬಳಕೆಯಾಗುತ್ತಿದ್ದು, ಅದಕ್ಕೆ ಪೂರಕವಾಗಿ ನಿರ್ವಹಣಾ ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದೆ. ಆದರೆ ಕೇವಲ ಯೋಜನೆಗಳಿಂದ ತಳಮಟ್ಟದಲ್ಲಿ ಅಂತರ್ಜಲ ಬಳಕೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಆಗುವುದಿಲ್ಲ. ಬದಲಾಗಿ ರೈತರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಯಾವ ಬೆಳೆಗೆ ಎಷ್ಟು ನೀರು ಬಳಕೆ ಅಗಬೇಕು ಎನ್ನುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕೆ ರೈತರು, ಸಮಾಜದ ಸಹಕಾರವೂ ಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ ಎಂದರು.

ಪ್ರಪಂಚದಲ್ಲಿ ಅಂತರ್ಜಲ ಬಳಕೆ ಮಾಡುವ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಅಲ್ಲದೇ ದೇಶದಲ್ಲಿ ಯುವ ಪಿಳೀಗೆಯು ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಅಂತರ್ಜಲದ ವಿಷಯದಲ್ಲಿ ಸಮತೋಲನ ಸಾಧಿಸಬೇಕಾದರೆ ಈ ಕುರಿತು ಜಾಗೃತಿಗೊಳ್ಳಬೇಕು. ಭವಿಷ್ಯದಲ್ಲಿ ಅಂತರ್ಜಲದ ಕುರಿತು ಅವರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಬೆಂಗಳೂರಿನಂತಹ ಮೆಟ್ರೋಪಾಲಿಟಿನ್ ನಗರಗಳಲ್ಲಿ ನೀರಿನ ನಿರ್ವಹಣೆಯ ವ್ಯವಸ್ಥೆ ಅಸಮರ್ಪಕವಾಗಿರುವುದರಿಂದ ಅರ್ಧ ವರ್ಷ ವಿಪರೀತ ನೀರು, ಇನ್ನರ್ಧ ವರ್ಷ ಕೊರತೆಯನ್ನು ಕಾಣುತ್ತಿದ್ದೇವೆ. ಇದನ್ನು ಹೋಗಲಾಡಿಸಲು ವೈಜ್ಞಾನಿಕವಾದ ವ್ಯವಸ್ಥೆ ಜಾರಿಗೊಳಿಸಬೇಕು ಎಂದರು.

ಅಟಲ್ ಭೂ ಜಲ ಯೋಜನೆಯ ನಿರ್ದೇಶಕ ಎಚ್.ಕಿರಣ್ ಮಾತನಾಡಿ, ಅಂತರ್ಜಲ ಅಪರೂಪದ ಸಂಪನ್ಮೂಲವಾಗಿದ್ದು, ಭಾರತದಲ್ಲಿ ಅದರ ಅವಲಂಬನೆ ಹೆಚ್ಚಿದೆ. ಶೇ.80 ರಷ್ಟು ಕೃಷಿಗೆ, ಶೇ. 85 ರಷ್ಟು ಗ್ರಾಮೀಣ ಭಾಗದ ಕುಡಿಯುವ ನೀರು ಬಳಕೆಗೆ, ಶೇ. 55ರಷ್ಟು ನಗರ ಭಾಗದ ಕುಡಿಯುವ ನೀರಿಗಾಗಿ ಅಂತರ್ಜಲದ ಬಳಕೆಯಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಅಂತರ್ಜಲ ಸಂರಕ್ಷಣೆಗೆ ಸರ್ಕಾರ ರೂಪಿಸಿರುವ ನೀತಿ, ಸಂರಕ್ಷಣೆ ಕುರಿತ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಲಾಯಿತು. ವಿಜ್ಞಾನಿ ರಾಹುಲ್ ಆರ್.ಶಿಂಧೆ, ಮೈವಿವಿ ಭೂ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ.ಡಿ.ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net